Site icon Ullalavani

ಉಳ್ಳಾಲ ಪಾಂಡ್ಯರಾಜ್ ಬಲ್ಲಾಳ್ ಶಿಕ್ಷಣ ಸಂಸ್ಥೆಯಲ್ಲಿ ಎನ್‍ಎಸ್‍ಎಸ್ ಶಿಬಿರ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ರಾಷ್ಟ್ರೀಯ ಸೇವಾ ಯೋಜನೆಯ ಕನಸು ಈ ಸಮಾಜದ ಸುಧಾರಣೆ ಆಗಿದೆ. ಯುವಶಕ್ತಿ ನಮ್ಮ ದೇಶದ ನಿಜವಾದ ಸಂಪನ್ಮೂಲ. ಈ ದೇಶದ ಶಕ್ತಿ. ಯುವಶಕ್ತಿ ಮನಸ್ಸು ಮಾಡಿದರೆ ಈ ದೇಶದ ಚಿತ್ರಣವನ್ನೇ ಬದಲಿಸಬಹುದು ಎಂದು ಮಂಗಳೂರಿನ ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಇಗ್ನೇಶಿಯಸ್ ನೇವಿಲ್ ನೊರೊನ್ಹಾ ಅಭಿಪ್ರಾಯಪಟ್ಟರು.

ಅವರು ಸೋಮವಾರ ಉಳ್ಳಾಲದ ಕೆ. ಪಾಂಡ್ಯರಾಜ್ ಬಲ್ಲಾಳ್ ಆಡಿಟೋರಿಯಂನಲ್ಲಿ ಕೆ. ಪಾಂಡ್ಯರಾಜ ಬಲ್ಲಾಳ್ ನರ್ಸಿಂಗ್ ಇನ್‍ಸ್ಟಿಟ್ಯೂಟ್ ಹಾಗೂ ಕಾಲೇಜ್ ಆಫ್ ನರ್ಸಿಂಗ್‍ನ ಜಂಟಿ ಆಶ್ರಯದಲ್ಲಿ ಆರು ದಿನಗಳ ಕಾಲ ನಡೆಯಲಿರುವ ಎನ್‍ಎಸ್‍ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯು ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಅದೆಷ್ಟೋ ಧನಾತ್ಮಕ ವಿಚಾರಗಳು ಹೊರಬರಲು ಸಾಧ್ಯವಾಗಿದೆ. ಸಮಾಜದಲ್ಲಿನ ತಪ್ಪುಗಳನ್ನು ತಿದ್ದಲು ಸಹಕಾರಿಯಾಗಿದೆ. ಹಾಗಾಗಿ ಶಿಬಿರಾರ್ಥಿಗಳು ಯಾವುದೇ ವಿಚಾರದ ಕುರಿತಾಗಿ ಜನಜಾಗೃತಿ ಮೂಡಿಸುವತ್ತ ಹಾಗೂ ಜನರಲ್ಲಿ ಅರಿವು ಮೂಡಿಸಿ ಅದರಿಂದಾದ ಬದಲಾವಣೆಯ ಬಗ್ಗೆಯೂ ಗಮನಹರಿಸಬೇಕು ಎಂದ ಅವರು ಆರೋಗ್ಯವಂತ ಸಮಾಜ ನಿರ್ಮಾಣದ ಹಿಂದೆ ಎನ್‍ಎಸ್‍ಎಸ್‍ನ ಪಾತ್ರ ಮಹತ್ವದ್ದಾಗಿದ್ದು, ಸಾಂಕ್ರಾಮಿಕ ರೋಗಗಳು, ಏಡ್ಸ್, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಬಾಲಕಾರ್ಮಿಕರು, ಶಿಕ್ಷಣ, ಶಿಕ್ಷಣದ ವ್ಯವಸ್ಥೆ ಹೀಗೆ ಹಲವು ವಿಚಾರಗಳಲ್ಲಿ ಈ ಸಮಾಜಕ್ಕೆ ಒಳಿತು ಕೆಡುಕುಗಳ ಬಗ್ಗೆ ಅರಿವು ಮೂಡಿಸಬೇಕು. ಅದಕ್ಕಾಗಿ ಕಾಲೇಜಿನಲ್ಲಿಯೇ ಎಲ್ಲವನ್ನೂ ಮಾಡಬೇಕಿಂದಿಲ್ಲ. ರಸ್ತೆಗಿಳಿದು ಚಿಕ್ಕ ಚಿಕ್ಕ ತಂಡವನ್ನು ಕಟ್ಟಿಕೊಂಡು ಬೀದಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸುವುದರಿಂದ ಜನರನ್ನು ಸಲುಭದಲ್ಲಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ. ಪ್ರಿಯಾ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.

ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಕೈನಿ ಸಿಸಿಲಿಯಾ, ಪಾಂಡ್ಯರಾಜ ಬಲ್ಲಾಳ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಸೋನಿಯಾ ಸೆಬೆಸ್ಟಿಯನ್ ಉಪಸ್ಥಿತರಿದ್ದರು.

ಎನ್‍ಎಸ್‍ಎಸ್ ವಿದ್ಯಾರ್ಥಿನಿ ಮರಿಯಾ ಬೆನೆಡಿಕ್ಟ್ ಸ್ವಾಗತಿಸಿದರು. ಎನ್‍ಎಸ್‍ಎಸ್ ಸಂಯೋಜನಾ ಅ„ಕಾರಿ ಚೈತ್ರಾ ನಾಯಕ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಎಲಿಝೆಬೆತ್ ರಾಯ್ ಹಾಗೂ ಬೆಟ್ಟಿ ಬಾಬು ಕಾರ್ಯಕ್ರಮ ನಿರೂಪಿಸಿದರು. ಜಿಸಾ ಜೋಸ್ ಅತಿಥಿಗಳನ್ನು ಪರಿಚಯಿಸಿದರು.
ಲಯಾ ಕೆ.ವಿ. ವಂದಿಸಿದರು.

Exit mobile version