ತಲಪಾಡಿ:ಗೋಮಾತೆ,ಭೂಮಾತೆ,ಜನ್ಮದಾತೆಯರ ಗೌರವಕ್ಕೆ ಚ್ಯುತಿ ಬಾರದಂತೆ ಈ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಸಮಾಜದ ಮಾತೃ ಶಕ್ತಿಗಿದೆ. ಮುಂದಿನ ದಿನಗಳಲ್ಲಿ ಮಾತೃ ಶಕ್ತಿಯು ಒಂದಾಗಿ ಒಟ್ಟಾಗಿ ಸಂಸ್ಕಾರಯುತ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸೇವಾ ಭಾರತೀಯ ಕಾರ್ಯದರ್ಶಿಯಾದ ಚನ್ನಯ ಸ್ವಾಮಿ ಹೇಳಿದರು.
ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಕೇಶವ ಶಿಶು ಮಂದಿರ ಕಿನ್ಯ ಇದರ ಮಾತೃ ಮಂಡಳಿ ವತಿಯಿಂದ ನಡೆದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ನಮ್ಮ ದೇಶದಲ್ಲಿ 51 ಶಕ್ತಿ ಪೀಠಗಳಿದ್ದು ಅದು ನಮಗೆ ಪೂಜನೀಯವಾಗಿದ್ದು, ಗೋದಾನ, ಸಾಮೂಹಿಕ ವಿವಾಹ,ಬಾಲಗೋಕುಲ,ಕಿಶೋರಿ ಕಾರ್ಯಕ್ರಮ ಇನ್ನಿತರ ಸೇವಾ ಚಟುವಟಿಕೆಗಳನ್ನು ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.ಶ್ರೀದೇವಿಯು ದುಷ್ಟರನ್ನು ನಿಗ್ರಹಿಸಿ ಸಜ್ಜನರನ್ನು ರಕ್ಷಿಸಿದ ಹಾಗೆ ದೇಶಕ್ಕೆ ಬಂದ ಎಲ್ಲಾ ಕಷ್ಟಗಳಿಂದ ಪಾರಾಗಬೇಕಾದರೆ ಮಾತೃಶಕ್ತಿ ಒಂದಾಗಿ ಒಟ್ಟಾಗಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವುದು ಇಂದಿನ ಕಾಲದಲ್ಲಿ ಅನಿವಾರ್ಯವಾಗಿದೆ.ಶಾರದಾ ಮಾತೆ,ಅಹಲ್ಯಾಬಾಯಿ ಹೋಲ್ಕರ್,ಭಗಿನಿ ನಿವೇದಿತಾ, ಈ ಮೂರು ಮಾತೆಯರು ತಮಗೆ ಎದುರಾದಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮನ್ನು ದೇಶಕ್ಕಾಗಿ ಮತ್ತು ಧರ್ಮಕ್ಕಾಗಿ ಸಮರ್ಪಣೆ ಮಾಡಿದ್ದ ಆ ಉದಾತ್ತ ಚಿಂತನೆಯು ನಮ್ಮ ತಾಯಂದಿರಿಗೆ ನಿದರ್ಶನವಾಗಲಿ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಭಾರತದ ಸನಾತನ ಧರ್ಮದಲ್ಲಿ ಮಾತೆಯರಿಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ. ನಮ್ಮ ಪ್ರಕೃತಿಯಲ್ಲಿ ಹರಿಯುವ ಎಲ್ಲಾ ನದಿಗಳು ಮಾತೆಯ ಹೆಸರಿನಲ್ಲಿಯೇ ಪೂಜನೀಯ ಸ್ಥಾನಗಳನ್ನ ಪಡಕೊಂಡಿವೆ. ನಮ್ಮ ದೇಶವನ್ನು ರಕ್ಷಿಸಲು ಹಾಗೂ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಮಾತೆಯರಿಂದ ಮಾತ್ರ ಸಾಧ್ಯ ಎಂದರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ ದಂಪತಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಪೂಜ್ಯರಾದ ಸುದರ್ಶನ್ ಬನ್ನಿತಾಯ, ಕ್ಷೇತ್ರದ ಆಡಳಿತ ಮುಕ್ತೇಸರರಾದ ಡಾ.ಮೋಹನ್ ದಾಸ್ ರೈ ಸಾಂತ್ಯಗುತ್ತು, ಕೇಶವ ಶಿಶು ಮಂದಿರದ ಗೌರವಾಧ್ಯಕ್ಷರಾದ ಶಿವರಾಮ್ ಶೆಟ್ಟಿ ಸಾಂತ್ಯಗುತ್ತು,ಅಧ್ಯಕ್ಷರಾದ ವಾಸುದೇವ ಮಿತ್ತಡ ,ವ್ಯವಸ್ಥಾಪಕರಾದ ನಾರಾಯಣ ಕಜೆ ಉಪಸ್ಥಿತರಿದ್ದರು.
ನಯನಾ ಪಾರ್ಥಸಾರಥಿ ಸ್ವಾಗತಿಸಿ,ಜಯಮಾಲ ವಂದಿಸಿದರು.ಕುಮಾರಿ ಹೃತಿಕ ನಿರೂಪಿಸಿದರು.
