UN networks
ಉಳ್ಳಾಲ: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪತಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 33ನೇ ಪದವಿ ಪ್ರಧಾನ ಸಮಾರಂಭ ಎ.29 ರಂದು ಬೆಳಿಗ್ಗೆ 10ಕ್ಕೆ ಕಂಕನಾಡಿಯ ಫಾದರ್ ಮುಲ್ಲರ್ಸ್ ಕನ್ವೆನ್ಷನ್ ಸೆಂಟರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಹೇಳಿದರು.
ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ಕಾನ್ಫರೆನ್ಸ್ ಹಾಲ್ ನಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಡಾ. ಪೀಟರ್ ಪೌಲ್ ಸಲ್ದಾನ್ಹ ವಹಿಸಲಿದ್ದಾರೆ. ವಿನಾಯಕ ಮಿಷನ್ ರಿಸರ್ಚ್ ಫೌಂಡೇಶನ್ , ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ ಸೇಲಂ, ತಮಿಳುನಾಡು ಇದರ ಉಪಕುಲಪತಿ ಡಾ. ಪಿ.ಕೆ. ಸುಧೀರ್ ಪದವೀಧರರನ್ನು ಸನ್ಮಾನಿಸಲಿದ್ದಾರೆ ಎಂದರು.
ಆಡಳಿತಾಧಿಕಾರಿ ರೋಶನ್ ಕ್ರಾಸ್ತ ಮಾತನಾಡಿ ಸಮಾರಂಭದಲ್ಲಿ 97 ಹೋಮಿಯೋಪತಿ ಪದವಿ ಹಾಗೂ 18 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಸ್ನಾತಕೋತ್ತರ ಪದವಿಯ ವಿವಿಧ ವಿಶೇಷತೆಗಳಲ್ಲಿ 10 ರ್ಯಾಂಕ್ ಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಗೌರವಿಸಲಾಗುವುದು.
2016-17ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನು ಪದವೀಧರೆ ಡಾ. ಆಶ್ರಿತಾ ಬಿ.ಎ ಹಾಗೂ ಸ್ನಾತಕೋತ್ತರ ಪದವಿಯ ಮೆಟರಿಯಾ ಮೆಡಿಕಾ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಡಾ.ರೆಮ್ಯಾ ವರ್ಗೀಸ್ ಪಡೆದುಕೊಂಡಿದ್ದಾರೆ. ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯ ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ನೀಡಿರುವ ವಿದ್ಯಾರ್ಥಿ ವೇತನವನ್ನು 2019-20ರ ಹೋಮಿಯೋಪತಿ ಸೈಕ್ಯಾಟ್ರಿ ವಿಭಾಗದ ಡಾ. ಸುದೀಪ್ತಿ ಸಿಂಗ್ ಇವರಿಗೆ ಪ್ರಧಾನ ಮಾಡಲಾಗುವುದು.
ಸೇವಾ ಸಂಸ್ಥೆ ನೀಡುವ ಅಧ್ಯಕ್ಷೀಯ ಚಿನ್ನದ ಪದಕವನ್ನು ಅಂದೇ ಘೋಷಿಸಲಿದ್ದು, ಐದೂವರೆ ವರ್ಷಗಳ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಪದವಿ ವಿದ್ಯಾರ್ಥಿಗಳಿಗೆ ಸಿಗಲಿದೆ. ಜೊತೆಗೆ ಸ್ನಾತಕೋತ್ತರ ವಿಭಾಗದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ವಿಶೇಷ ಬಹುಮಾನದೊಂದಿಗೆ ಪುರಸ್ಕರಿಸಲಾಗುವುದು.
ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭವಾಗಿ 25 ವರ್ಷ ಪುರ್ಣಗೊಂಡಿದ್ದು, ಇದರ ಬೆಳ್ಳಿಹಬ್ಬ ಸಮಾರಂಭವು ಮೇ.6ರ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಸಭಾಂಗಣದಲ್ಲಿ ಜರಗಲಿದೆ .
ಸುದ್ಧಿಗೋಷ್ಠಿಯಲ್ಲಿ ಹೋಮಿಯೋಓಪತಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾ¯ರಾದ ಡಾ.ಇ.ಎಸ್.ಜೆ ಪ್ರಭುಕಿರಣ್, ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ, ಕಾರ್ಯಕ್ರಮ ಸಂಯೋಜಕ ಡಾ.ರಂಜನ್ ಸಿ. ಬ್ರಿಟ್ಟೋ ಮಾಧ್ಯಮ ಸಮಿತಿ ಸಂಯೋಜಕಿ ಡಾ.ಅನುಷ ಜಿ.ಎಸ್ ಉಪಸ್ಥಿತರಿದ್ದರು.
