UN networks
ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುವ ದ್ವಿಚಕ್ರ ಸವಾರರೇ ಹುಷಾರಾಗಿರಿ, ಜಾರಿ ಬಿದ್ದರೆ ಗಾಯ ಗ್ಯಾರಂಟಿ ಸ್ವಲ್ಪ ಎಡವಿದರೆ ಜೀವ ಗ್ಯಾರಂಟಿಯಲ್ಲ.
ಹೌದು ನವಯುಗ ಸಂಸ್ಥೆ ಕಳೆದ ಎರಡು ದಿನಗಳಿಂದ ತೊಕ್ಕೊಟ್ಟುವಿನಿಂದ ತಲಪಾಡಿಗೆ ತೆರಳುವ ಒಂದು ಭಾಗದಲ್ಲಿ ಮರುಡಾಮರೀಕರಣಕ್ಕಾಗಿ ಇದ್ದ ಡಾಮರನ್ನು ಅಗೆದು ಹಾಕಿದೆ. ಅದರ ಮೇಲೆ ಬೃಹತ್ ಗಾತ್ರದ ವಾಹನಗಳು ಚಲಿಸಿ ಹಲವೆಡೆ ರಸ್ತೆಯ ಇಕ್ಕೆಲ, ಮಧ್ಯಭಾಗಗಳಲ್ಲಿ ಕಲ್ಲುಗಳು ಶೇಖರಣೆಗೊಂಡು ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿಬೀಳುತ್ತಿದೆ. ಇಂದು ಸಂಜೆ ವೇಳೆ ಬೀರಿಯಿಂದ ಉಚ್ಚಿಲ ಕಡೆಗೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ರಸ್ತೆಮಧ್ಯಭಾಗದಲ್ಲಿ ಇಕ್ಕಟ್ಟಾದ ಡಾಮರಿನ ತುಂಡುಗಳ ನಡುವೆ ಸಿಲುಕಿ ರಸ್ತೆಗೆ ಉರುಳಿ ಬಿದ್ದಿದ್ದಾರೆ. ಪರಿಣಾಮ ತಲೆಗೆ ಭಾರೀ ಗಾಯವಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ದೂರು ಪಡೆದುಕೊಂಡಿದ್ದಾರೆ.
ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆ ಸಂಸ್ಥೆ ಕನಿಷ್ಠ ಎಚ್ಚರಿಕೆ ಫಲಕವನ್ನಾದರೂ ಹಾಕಿ ಕಾಮಗಾರಿ ನಡೆಸುವುದು ಸುರಕ್ಷತಾ ಕಾನೂನು. ಇಲ್ಲವಾದಲ್ಲಿ ದ್ವಿಚಕ್ರ ವಾಹನ ಸವಾರರನ್ನು ಸರ್ವಿಸ್ ರಸ್ತೆಯಲ್ಲಿ ತೆರಳುವಂತೆ ಮಾಡುವುದು ರಕ್ಷಣಾ ದೃಷ್ಟಿಯಿಂದ ಉತ್ತಮ. ಆದರೆ ಇವೆಲ್ಲವನ್ನು ಗಾಳಿಯಲ್ಲಿ ತೂರಿ ಸಂಸ್ಥೆ ಬೇಜವಾಬ್ದಾರಿತನದ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮರುಡಾಮರೀಕರಣವಾಗುವ ಮೊದಲು ಅಪಘಾತ ಸಂಭವಿಸಿ ಜೀವ ಹೋಗುವ ಮುನ್ನ ಸಂಸ್ಥೆ ಎಚ್ಚೆತ್ತು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಅನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
