Site icon Ullalavani

ಎಬಿವಿಪಿ ಪ್ರತಿಭಟನೆಗೆ ಮಣಿದ ಮಂಗಳೂರು ವಿ.ವಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮೆರಿಟ್ ಕೋಟಾದ ಶುಲ್ಕದ ಜತೆಗೆ ಸ್ವ ವಿತ್ತೀಯ ಕೋಟದ ಶುಲ್ಕವವನ್ನು ಏರಿಕೆ ಮಾಡಿರುವುದರ ವಿರುದ್ಧ ಕೊಣಾಜೆ ವಿ.ವಿ.ಆಡಳಿತ ಸೌಧದ ಎದುರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ಆಶ್ರಯದಲ್ಲಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಶುಲ್ಕ ಇಳಿಸುವಂತೆ ಆಗ್ರಹಿಸಿ ಬುಧವಾರದಂದು ಎರಡನೇ ಬಾರಿ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಮಣಿದ ಮಂಗಳೂರು ವಿ.ವಿ ಉಪಕುಲಪತಿಗಳು ಕೂಡಲೇ ಸಿಂಡಿಕೇಟ್ ಸಭೆ ಕರೆದು ಸ್ವ ವಿತ್ತೀಯ ಕೋಟಾದ ಶುಲ್ಕವನ್ನು ಇಳಿಕೆ ಮಾಡಿದ್ದಾರೆ.

ಸ್ವ-ವಿತ್ತೀಯ ಕೋಟಾದಡಿ ವಿದ್ಯಾರ್ಥಿಗಳು ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರಕೋರ್ಸುಗಳಿಗೆ ಪ್ರವೇಶಾಕಾತಿ ಪಡೆಯಬೇಕಾದರೆ ಈಗಿನ ಶುಲ್ಕ ಪದ್ದತಿಯಂತೆ 48,795 ರೂಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ, ಕಳೆದ ವರ್ಷವಿದ್ದ 39,280 ರೂಗಳ ಶುಲ್ಕಕ್ಕಿಂತ 9,515 ರೂಗಳನ್ನು ಈ ವರ್ಷ ಹೆಚ್ಚಿಸಲಾಗಿದೆ.

ಭೌತಶಾಸ್ತ್ರ ವಿಭಾಗದ ಸ್ವವಿತ್ತೀಯ ಶುಲ್ಕವನ್ನು ಕಳೆದ ವರ್ಷದ 41,280 ರೂಗಳಿಂದ 51,795 ರೂಗಳಿಗೆ ಏರಿಕೆ ಮಾಡಲಾಗಿದೆ. (10,515 ರೂ ಏರಿಕೆ). ಗಣಿತಶಾಸ್ತ್ರದ ಸ್ವ-ವಿತ್ತೀಯ ಶುಲ್ಕವನ್ನು 43,280 ರೂಗಳಿಂದ 53,795 ರೂಗಳಿಗೆ ಏರಿಕೆ ಮಾಡಲಾಗಿದೆ. (10,151 ರೂ ಏರಿಕೆ) ಕಂಪ್ಯೂಟರ್ ಸೈನ್ಸ್ ಮತ್ತು ದೈಹಿಕ ಶಿಕ್ಷಣ ಕೋರ್ಸುಗಳ ಸ್ವ-ವಿತ್ತೀಯ ಶುಲ್ಕವನ್ನು 45,280 ರೂಗಳಿಂದ 53,795 ರೂಗಳಿಗೆ ಏರಿಕೆ ಮಾಡಲಾಗಿದೆ. (8,515 ರೂ ಏರಿಕೆ) . ಮೆರಿಟ್ ಕೋಟಾದ ಅಡಿ ಎಲ್ಲರಿಗೂ ಪ್ರವೇಶ ಸಿಗಲು ಸಾಧ್ಯವಿರದ ಕಾರಣ ಸ್ವ-ವಿತ್ತೀಯ ಕೋಟದಡಿ ಪ್ರವೇಶ ಭಯಸುವ ಬಡ-ಪ್ರತಿಭಾವಂತ ವಿದ್ಯಾರ್ಥಿಗಳು ಈ ಹಿಂದಿನ ವರ್ಷವಿದ್ದ ದುಬಾರಿ ಶುಲ್ಕವನ್ನೇ ಭರಿಸಲು ಕಷ್ಟವಾದ ಪರಿಸ್ಥಿತಿ ಇತ್ತು. ಪ್ರಸಕ್ತ ವರ್ಷ ಶುಲ್ಕ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವುದರಿಂದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದರಲ್ಲಿ ಸಂದೇಹವಿಲ್ಲ ಹಾಗೂ ವಿಶ್ವವಿದ್ಯಾನಿಲಯದ ಉನ್ನತ ಶಿಕ್ಷಣವು ಹಣವಂತರ ಸ್ವತ್ತಾದಂತಾಗುತ್ತದೆ ಎಂದು ಆರೋಪಿಸಿ ಎಬಿವಿಪಿ ಸೋಮವಾರ ಕೊಣಾಜೆಯ ಮಂಗಳಾ ಸಭಾಂಗಣದೆದುರು ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಉಪಕುಲಪತಿಗಳು ಮೆರಿಟ್ ಕೋಟಾದವರ ಶುಲ್ಕವನ್ನು ಇಳಿಕೆ ಮಾಡಿದ್ದರು. ಇದರಿಂದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳು ವಂಚನೆಗೊಳಗಾಗುತ್ತಾರೆ ಎಂದು ಆರೋಪಿಸಿ ಮತ್ತೆ ನೂರಕ್ಕೂ ಅಧಿಕ ಮಂದಿ ಎಬಿವಿಪಿ ವಿದ್ಯಾರ್ಥಿಗಳು ಆಡಳಿತ ಸೌಧದ ಎದುರುಗಡೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಉಪಕುಲಪತಿಗಳು ಮಣಿದು ತುರ್ತಾಗಿ ಕರೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಕೈಗೊಂಡು ಸ್ವ-ವಿತ್ತೀಯ ವಿದ್ಯಾರ್ಥಿಗಳಿಗೆ ಏರಿಕೆಗೊಳಿಸಿದ ಶುಲ್ಕದಲ್ಲಿ ಶೇ.30 ರಷ್ಟು ಕಡಿಮೆಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.

ಈ ಸಂದರ್ಭ ಎಬಿವಿಪಿ ನಗರ ಕಾರ್ಯದರ್ಶಿ ಜಯೇಶ್, ಜಿಲ್ಲಾ ಸಂಚಾಲಕ ಚೇತನ್ ಪಡೀಲ್, ನಗರ ಸಹ ಕಾರ್ಯದಶಿ ದೀತೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುದಿಪ್ತ್ ಮೊದಲಾದವರು ಇದ್ದರು.

Exit mobile version