UN NEWS NETWORKS
ಉಳ್ಳಾಲ: ಮೂರು ದಶಕಗಳ ಅಭ್ಯಾಸವೇ ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಎಂತಹ ತಂತ್ರಜ್ಞಾನಕ್ಕಿಂತಲೂ ಮಿಗಿಲಾಗಿರುವುದು ಅಭ್ಯಾಸದ ಜ್ಞಾನ. ಯುವವೈದ್ಯರು ತಂತ್ರಜ್ಞಾನದ ಜೊತೆಗೆ ನಾವೀನ್ಯತೆಯತ್ತ ಚಿತ್ತ ಹರಿಸಿ ಮೂತ್ರಶಾಸ್ತ್ರದಲ್ಲಿ ರೋಗಿಗಳ ಆರೈಕೆಯಲ್ಲಿ ಮುಂದುವರಿಯಿರಿ ಎಂದು ಯುರಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಇದರ ಕಾರ್ಯದರ್ಶಿ ಡಾ. ಜಿಜಿ ಲಕ್ಷ್ಮಣ್ ಪ್ರಭು ಅಭಿಪ್ರಾಯಪಟ್ಟರು.
ಅವರು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಜರಗಿದ ‘ ಮಾಸ್ಟರ್ ಕ್ಲಾಸ್ ಇನ್ ವ್ಯಾಸ್ಕುಲರ್ ಆಕ್ಸೆಸ್ ಸರ್ಜರಿ ಆಂಡ್ ಹ್ಯಾಂಡ್ಸ್ ಆನ್ ವಕ್9ಶಾಪ್ ಆನ್ ವ್ಯಾಸ್ಕ್ಯುಲರ್ ಸೂಚರಿಂಗ್’ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಮೆರಿಕಾದ ಇಂಡಿಯನ್ ಸ್ಕೂಲ್ ಆಫ್ ಯುರಾಲಜಿ ಸಂಸ್ಥೆ ಮೂತ್ರಶಾಸ್ತ್ರ ವಿಭಾಗದಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ. ಕಸಿ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಅಂಗರಚನಾಶಾಸ್ತ್ರದಲ್ಲಿ ಭಾಗಿಯಾಗಿದೆ. ಯುವವೈದ್ಯರಲ್ಲಿ ತಾಂತ್ರಿಕ ಜ್ಞಾನದ ವೃದ್ಧಿಗೆ ಕಾರ್ಯಗಾರಗಳು ಸಹಕಾರಿ ಎಂದರು.
ಕಾರ್ಯಗಾರವನ್ನು ಉದ್ಘಾಟಿಸಿದ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಡಾ| ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ದೇಶದಲ್ಲಿ 5 ಲಕ್ಷ ಮಂದಿಗೆ ಒಬ್ಬ ಮೂತ್ರಶಾಸ್ತ್ರಜ್ಞ ಇರುವುದು ಆತಂಕದ ವಿಚಾರ. ಅಮೆರಿಕಾದಲ್ಲಿ 20 ಪಟ್ಟು ಹೆಚ್ಚು ಮೂತ್ರಶಾಸ್ತ್ರದ ವೈದ್ಯರಿದ್ದಾರೆ. ಭಾರತದಲ್ಲಿಯೂ ಮೂತ್ರಶಾಸ್ತ್ರ ವಿಭಾಗವೂ ಸೂಪರ್ ಸ್ಪೆಷಾಲಿಟಿಯಾಗಿ ಬೆಳವಣಿಗೆಯಾಗಬೇಕಿದೆ. ಯುರಾಲಜಿ ವಿಭಾಗದ ತರಬೇತಿ ಪ್ರಭಾವಶಾಲಿಯಾಗಿದ್ದು, ಮೈಕ್ರೋಸರ್ಜಿಕಲ್ ಪ್ರವೇಶ, ಉತ್ತಮ ವರ್ಧನೆ, ದೃಶ್ಯೀಕರಣ, ಉತ್ತಮ ಕೌಶಲ್ಯಗಳು ತರಬೇತುದಾರರಿಗೆ ಹಾಗೂ ಪಡೆಯುವವರಿಗೆ ಮುಖ್ಯವಾಗಿರುತ್ತದೆ. ನಿಟ್ಟೆ ವಿ.ವಿ ಯಲ್ಲಿಯೂ ದೊಡ್ಡ ಕೌಶಲ್ಯ ಪ್ರಯೋಗಾಲಯ ಇದ್ದು, ತಾಂತ್ರಿಕವಾಗಿ ಗಟ್ಟಿಯಾಗಿರುವಂತಹ ವಿಭಾಗವನ್ನು ಸ್ಥಾಪಿಸಲು ಚಿಂತನೆಯಿದ್ದು ಯುರಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಬೆಂಬಲಿಸಿದರೆ ವಿಭಾಗ ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಯಲು ಸಾಧ್ಯ ಎಂದರು.
ಅಮೆರಿಕಾದ ಇಂಡಿಯನ್ ಸ್ಕೂಲ್ ಆಫ್ ಯುರೋಲಾಜಿ ಅಧ್ಯಕ್ಷ ಡಾ| ಅರುಣ್ ಚಾವ್ಲ , ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಡೀನ್ ಡಾ| ಪಿ.ಎಸ್ ಪ್ರಕಾಶ್ ಮುಖ್ಯ ಅತಿಥಿಗಳಾಗಿದ್ದರು.
ಕ್ಷೇಮ ಯುರಾಲಜಿ ವಿಭಾಗ ಮುಖ್ಯಸ್ಥ ಡಾ| ರಾಜೀವ್ ಟಿ.ಪಿ ಸ್ವಾಗತಿಸಿದರು. ಡಾ| ಸೂರಜ್ ಹೆಗ್ಡೆ ಪಿ. ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ನರೇಂದ್ರ ಪೈ, ಡಾ| ರಘುರಾಜ್, ಡಾ| ನಂದಕಿಶೋರ್, ಡಾ| ನಿಶ್ಚಿತ್ ಡಿಸೋಜ, ಡಾ| ಜನಾರ್ದನ್ ಭಾಗವಹಿಸಿದ್ದರು.