Site icon Ullalavani

ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಆಯ್ಕೆ ಶಿಬಿರದ ಸಮಾರೋಪ: ಪ್ರಶಸ್ತಿ ಪ್ರದಾನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ವಿಶ್ವವಿದ್ಯಾನಿಲಯ ಮಟ್ಟದ ಆಯ್ಕೆ ಶಿಬಿರ ಹಾಗೂ ನಾಯಕತ್ವ ಶಿಬಿರದ ಸಮಾರೋಪ ಸಮಾರಂಭ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿ ನಡೆಯಿತು.
ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸಲು ರಾಷ್ಟ್ರೀಯ ಸೇವಾ ಯೋಜನೆಯನ್ನು ನಾವು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಇಂತಹ ಶಿಬಿರಗಳು ನಮ್ಮ ಜೀವನ-ಶಿಕ್ಷಣವನ್ನು ಅರ್ಥಪೂರ್ಣವಾಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ನಮ್ಮಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಮೌಲ್ಯಯುತ ಜೀವನವನ್ನು ನಡೆಸಲು ಬೇಕಾದ ಜವಬ್ದಾರಿಯ ಅರಿವನ್ನು ಬೆಳೆಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ರಾಷ್ಟ್ರೀಯ ಸೇವಾ ಯೋಜನೆಯಂತಹ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಮತ್ತು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಂಡರೆ ಮಾತ್ರ ರಾಷ್ಟ್ರೀಯ ಸೇವಾ ಯೋಜನೆಯು ನಮ್ಮನ್ನು ಬೆಳೆಸಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ಶಿಸ್ತು, ಆತ್ಮಸ್ಥೈರ್ಯ, ನಾಯಕತ್ವ,ಮಾನವೀಯತೆಯನ್ನು ಗುಣಗಳೊಂದಿಗೆ ಉತ್ತಮ ಬದುಕಿನ ಮೌಲ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಇಂತಹ ಶಿಬಿರಗಳಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 2013-14ನೇ ಸಾಲಿನ ಹಾಗೂ 2014-15ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

2013-14ನೇ ಸಾಲಿನಲ್ಲಿ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟನ ಪ್ರಶಸ್ತಿಯನ್ನು ಮಂಗಳೂರಿನ ರಾಮಕೃಷ್ಣ ಕಾಲೇಜು, ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಂಕದಕಟ್ಟೆಯ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಪಡೆದುಕೊಂಡಿತು. ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿಯನ್ನು ರಾಮಕೃಷ್ಣ ಕಾಲೇಜಿನ ನಟೇಶ್ ಆಳ್ವ, ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ನಂದಕಿಶೋರ್, ಹಾಗೂ ನಿರಂಜನ ಸ್ವಾಮಿ ಕಾಲೇಜಿನ ಗಣೇಶ್ ಬಿ.ಎಂ.ಅವರು ಪಡೆದುಕೊಂಡರು. ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಸುರತ್ಕಲ್ ಗೋವಿಂದಾಸ್ ಕಾಲೇಜಿನ ಅರ್ಪಿತ ವಿ.ಶೆಟ್ಟಿ, ಸಂತ ಆಗ್ನೆಸ್ ಕಾಲೇಜಿನ ನೆಲ್ವಿಟ್ ಸಿ. ನೊರೊನ್ಹ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶ್ಯಾಮ ಪ್ರಸಾದ್ ಅವರು ಪಡೆದುಕೊಂಡರು.

2014-15ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರಶಸ್ತಿಯನ್ನು ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೋಣಿಕೊಪ್ಪದ ಕಾವೇರಿ ಕಾಲೇಜು ಹಾಗೂ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ಪಡೆದುಕೊಂಡಿತು. ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿಯನ್ನು ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶೇಷಪ್ಪ ಕೆ, ಗೋಣಿಕೊಪ್ಪ ಕಾವೇರಿ ಕಾಲೇಜಿನ ವನಿತ್ ಕುಮಾರ್ ಎಂ.ಎನ್, ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಡಾ.ನಾಗರತ್ನ ಕೆ.ಎ.ಅವರು ಪಡೆದುಕೊಂಡರು. ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ನಿಟ್ಟೆ ಡಾ.ಎನ್.ಎಸ್.ಎ.ಎಂ.ಪ್ರಥಮ ದರ್ಜೆ ಕಾಲೇಜಿನ ಸ್ವಾತಿ ಪಿ.ಶೆಟ್ಟಿ ಹಾಗೂ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ರಜತ್ ಕುಮಾರ್ ಎನ್.ಎಸ್. ಅವರು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ.ವಿನಿತಾ ಕೆ.ಅವರು ದನ್ಯವಾದಗೈದರು.

Exit mobile version