UN NEWS NETWORKS
ಧರ್ಮಸ್ಥಳ : ಉಳ್ಳಾಲದ ಪ್ರೆಸ್ ಕ್ಲಬ್ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂಧಿಸುವ ಸಂಸ್ಥೆಯಾಗಲಿ, ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಅವರಿಗೆ ಎದುರಾಗುವ ಸಮಸ್ಯೆಗಳಿಗೆ ರಕ್ಷಣೆ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕೊಡುವಂತಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಅವರು ತೊಕ್ಕೊಟ್ಟುವಿನ ಸೇವಾ ಸೌಧ ಕಚೇರಿಯ ಎರಡನೇ ಮಹಡಿಯಲ್ಲಿ ಮಾ.1 ರಂದು ಉದ್ಘಾಟನೆಗೊಳ್ಳಲಿರುವ ಉಳ್ಳಾಲ ಪ್ರೆಸ್ ಕ್ಲಬ್ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಪತ್ರಕರ್ತರು ಜನರ ಜೀವನಾಡಿಯಾಗಿದ್ದಾರೆ. ಪ್ರಸ್ತುತ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಾಗಿ ಸಮಯ ಕಳೆಯುವುದಿಲ್ಲ. ಬದಲಾಗಿ ಮರುದಿನ ಬರುವ ಪತ್ರಿಕೆಯಲ್ಲಿ ಸುದ್ಧಿಯನ್ನು ಓದುವ ಮೂಲಕ ಬೇಕಾದಷ್ಟೇ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ತರವಾದದ್ದು ಎಂದು ಹೆಗ್ಗಡೆ ತಿಳಿಸಿದರು.
ಈ ಸಂದರ್ಭ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪತ್ರಕರ್ತ ಉದಯವಾಣಿಯ ವಸಂತ್ ಎನ್. ಕೊಣಾಜೆ ಇವರನ್ನು ಹೆಗ್ಗಡೆಯವರು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್ ಮತ್ತು ಉಳ್ಳಾಲ ತಾಲೂಕು ಕಾರ್ಯಕಾರಿಣಿ ಸಮಿತಿ ಸದಸ್ಯ ರಜನೀಶ್ ಬಬ್ಬುಕಟ್ಟೆ ಉಪಸ್ಥಿತರಿದ್ದರು.