UN NEWS NETWORKS
ಉಳ್ಳಾಲ: ದೇಶವನ್ನು ಉದಾತ್ತ ಮೌಲ್ಯಗಳ ಮೂಲಕ ಮೊದಲ ಸ್ಥಾನದಲ್ಲಿರಿಸುವ ಚಿಂತನೆಗಳು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡ ರಾಷ್ಟ್ರ ಧ್ವಜಾರೋಹಣದಂತಹ ಪವಿತ್ರವಾದ ಕಾರ್ಯಗಳ ಮೂಲಕ ಆಗುವುದು ಎಂದು ಪಶ್ಚಿಮ ವಲಯ ಐಜಿಪಿ ಡಾ| ಚಂದ್ರಗುಪ್ತ ಹೇಳಿದ್ದಾರೆ.
ಅವರು ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ ಕರಾವಳಿಯ ಅತಿ ಎತ್ತರದ 164 ಫೀಟ್ ಉದ್ದದ ರಾಷ್ಟ್ರಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ತ್ಯಾಗ, ಬಲಿದಾನ, ಶೌರ್ಯ, ಆತ್ಮಸ್ಥೈರ್ಯ, ಶಾಂತಿ, ಸೌಹಾರ್ದತೆ, ಸಮನ್ವಯತೆ, ಬಹುಸಂಸ್ಕøತಿಯ ಆಶಯಗಳು ರಾಷ್ಟ್ರಧ್ವಜದ ಮೂಲಕ ಎಲ್ಲರಲ್ಲೂ ಬೇರೂರುವುದು. ರಾಷ್ಟ್ರಧ್ವಜವನ್ನು ಕಂಡ ಕ್ಷಣ ಚಿಂತನೆಗಳು ನೆನಪಿಗೆ ಬರುವುದು. ಈ ನಿಟ್ಟಿನಲ್ಲಿ ದೇಶದ ಬೆಳವಣಿಗೆಗಳು ಇಂತಹ ಕಾರ್ಯಕ್ರಮಗಳಿಂದ ನೆರವೇರುವುದು ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ, ಸಂಸ್ಥೆ ಪರಿಸರದಲ್ಲಿ 24 ವರ್ಷಗಳಿಂದ ಆಸ್ಪತ್ರೆಯನ್ನು ನಡೆಸಿಕೊಂಡು ಬರುತ್ತಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ಬೃಹತ್ ರಾಷ್ಟ್ರಧ್ವಜದ ಅನಾವರಣ ಆಗಿರುವುದು ಗೌರವ ತಂದಿದೆ. ಪ್ರತಿ ವಿದ್ಯಾರ್ಥಿಗಳು ಸಂಸ್ಥೆ ಒಳಬರುವಾಗ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ನೀಡಿ ಪ್ರವೇಶಿಸಿ ಕಾರ್ಯಗಳಲ್ಲಿ ಭಾಗಿಯಾಗಿ. ಗಾತ್ರ ಎಷ್ಟಾದರೂ ವಿಚಾರವಲ್ಲ, ರಾಷ್ಟ್ರಧ್ವಜದ ಮಹತ್ವ ಬಹುಮುಖ್ಯವಾಗಿರುತ್ತದೆ ಎಂದರು.
ಈ ಸಂದರ್ಭ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ವಿಶಾಲ್ ಹೆಗ್ಡೆ, ಸಹಕುಲಾಧಿಪತಿ ಡಾ| ಎಂ. ಶಾಂತರಾಮ ಶೆಟ್ಟಿ, ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಉಪಕುಲಪತಿ ಡಾ| ಎಂ.ಎಸ್ ಮೂಡಿತ್ತಾಯ, ಹಣಕಾಸು ವಿಭಾಗದ ನಿರ್ದೇಶಕ ರಾಜೇಂದ್ರ ಎಂ. ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್ ಶೆಟ್ಟಿ ಉಪಸ್ಥಿತರಿದ್ದರು. ಕುಲಸಚಿವ ಡಾ| ಹರ್ಷ ಹಾಲಹಳ್ಳಿ ನಿರೂಪಿಸಿದರು.