Site icon Ullalavani

ಮಾನವೀಯತೆಯ ಹಿರಿತನ ವೈದ್ಯರಲ್ಲಿ ಜಾಗೃತವಾಗಲಿ : ಡಾ| ಮೋಹಿತ್ ಗುಪ್ತಾ

UN NEWS NETWORKS

ಉಳ್ಳಾಲ: ನಿಟ್ಟೆ-ಜಪಾನ್ ವಿಶ್ವವಿದ್ಯಾನಿಲಯಗಳ ಒಪ್ಪಂದಗಳು ತಾಂತ್ರಿಕವಾಗಿ ಮಾತ್ರವಲ್ಲ ,ಮನಸ್ಸು, ಪ್ರೀತಿ ಹೃದಯಗಳ ಸಂಗಮವಾಗಿ ಹೊರಹೊಮ್ಮಲಿ. ಮಾನವೀಯತೆಯ ಹಿರಿತನ ಎಲ್ಲರಲ್ಲೂ ಜಾಗೃತವಾಗಿ ಎಲ್ಲರ ಕೈಗಳು ಒಂದಾಗಿ ಜಗತ್ತಿನಾದ್ಯಂತ ಉತ್ತಮ ಸೇವೆ ದೊರಕಲಿ ಎಂದು ದೆಹಲಿ ಜಿ.ಬಿ ಪಂಥ್ ಆಸ್ಪತ್ರೆಯ ಹೃದಯಶಾಸ್ತ್ರ ವಿಭಾಗದ ಪ್ರೊ. ಡಾ| ಮೋಹಿತ್ ಗುಪ್ತಾ ಅಭಿಪ್ರಾಯಪಟ್ಟರು.


ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ , ಜಪಾನ್‍ನ ಮಿಯಾಝಕಿ ವಿಶ್ವವಿದ್ಯಾನಿಲಯಗಳ ನೇತೃತ್ವದಲ್ಲಿ ಕ್ಷೇಮ ಹಾಗೂ ಮಿಯಾಝಕಿ ವಿ.ವಿಗಳ ಶರೀರಶಾಸ್ತ್ರ , ಕೇಂದ್ರ ಸಂಶೋಧನಾ ಪ್ರಯೋಗಾಲಯಗಳ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಆವಿಷ್ಕಾರ ಆಡಿಟೋರಿಯಂನಲ್ಲಿ ಆಯೋಜಿಸಲಾದ `ಟ್ರಾನ್ಸ್ ಡಿಸಿಪ್ಲನರಿ ವಿಧಾನಗಳಿಂದ ಭವಿಷ್ಯದ ಆರೋಗ್ಯ ತಂತ್ರ’ ವಿಚಾರಗಳ ಕುರಿತಾಗಿ ಇಂಡೋ-ಜಪಾನ್ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಮಾಡುವ ವಿಚಾರಗಳ ಕುರಿತು ಚಿಂತನೆಗಳನ್ನಿಟ್ಟುಕೊಂಡು ಆಲೋಚನೆಗಳನ್ನು ಬದಲಾಯಿಸಿ, ಹೊಸ ಆಯ್ಕೆಗಳ ಮೇಲೆ ಮುಂದುವರಿಯುತ್ತಾ ಯಶಸ್ಸಿನತ್ತ ಮುಂದುವರಿಯಿರಿ. ತಾಂತ್ರಿಕತೆಯ ವಿಚಾರಗಳ ನಡುವೆ ಪ್ರೀತಿ, ಸಹಾನುಭೂತಿ, ಸಮನ್ವಯತೆಯನ್ನು ಮನದಲ್ಲಿಟ್ಟುಕೊಂಡು ವ್ಯವಹರಿಸಿ ಎಂದರು.
ಪ್ರಜಾಪ್ರಭುತ್ವ , ಪವಿತ್ರ ಸಂವಿಧಾನ ಒಳಗೊಂಡ ಪರಂಪರೆಯ ದೇಶ ಭಾರತ. ಇಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ವೈದ್ಯರು ಸಂತೋಷವಾಗಿದ್ದರೆ ರೋಗಿಗಳನ್ನು ಸಂತೋಷವಾಗಿಸಲು ಸಾಧ್ಯ, ಅಸೂಯೆ, ದ್ವೇಷಗಳನ್ನು ಕಾರ್ಯದಲ್ಲಿ ದೂರವಾಗಿರಿಸಿ ಪ್ರೀತಿ ಮತ್ತು ಸಹಾನುಭೂತಿಯ ಮನದೊಂದಿಗೆ ರೋಗಿಗಳ ಜತೆಗಿರುವ ವಿಚಾರಗಳೇ ಸಮ್ಮೇಳನದ ಉದ್ದೇಶವಾಗಿದೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ| ಎಂ.ಶಾಂತರಾಮ ಶೆಟ್ಟಿ, ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಉಪಕುಲಪತಿ ಡಾ|ಎಂ.ಎಸ್ ಮೂಡಿತ್ತಾಯ, ಕುಲಸಚಿವ ಡಾ| ಹರ್ಷ ಹಾಲಹಳ್ಳಿ, ಸಮ್ಮೇಳನ ಸಂಘಟಕರುಗಳಾದ ಕ್ಷೇಮ ಡೀನ್ ಡಾ| ಪಿ.ಯಸ್ ಪ್ರಕಾಶ್, ಜಪಾನ್ ಮಿಯಾಝಕಿ ವಿಶ್ವವಿದ್ಯಾನಿಲಯದ ಹೃದಯಕ್ತನಾಳ- ಶರೀರಶಾಸ್ತ್ರ ವಿಭಾಗದ ಡಾ| ವಾಟನಬೆ ನೊಝೊಮಿ, ಡಾ| ಹರೀಶ್ ಕುಮಾರ್ ಮದ್ಯಸ್ಥ, ಉಪಡೀನ್‍ಗಳಾದ ಡಾ| ಅಮೃತ್ ಮಿರಾಜಕರ್, ಡಾ| ಜಯಪ್ರಕಾಶ್ ಪಿ.ಶೆಟ್ಟಿ, ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗ ನಿರ್ದೇಶಕ ಡಾ| ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಡಾ| ದಾಮೋದರ ಗೌಡ ಕೆ.ಎಸ್ ನಿರೂಪಿಸಿದರು. ಡಾ| ಸುಚೇತಾ ಕುಮಾರಿ ಯನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ವಿಶ್ವೇಶ್ವರಿ, ಸ್ವಾಮಿನಾಥನ್ ಮತ್ತು ಡಾ| ಮೋಹಿತ್ ಗುಪ್ತಾ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ದೇರಳಕಟ್ಟೆಯ ಹವ್ಯಾಸಿ ಮಕ್ಕಳ ಬಳಗದ ವತಿಯಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Exit mobile version