UN networks
ಉಳ್ಳಾಲ: ದ.ಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಪೂರ್ವಭಾವಿಯಾಗಿ ನೀರು ಪೂರೈಕೆಗೆ ಪರ್ಯಾಯ ತಯಾರಿ ನಡೆಸುವಂತೆ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಜೆ.ಡಿಎಸ್ ದ.ಕ ಜಿಲ್ಲೆ ಮನವಿ ಮಾಡಿದೆ.
ಪ್ರಸಕ್ತ ವರ್ಷ ಬೇಸಿಗೆಕಾಲ ಆರಂಭವಾಗುವ ಮುಂಚೆಯೇ ಜನವರಿ ತಿಂಗಳಿನಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಾವಿಗಳಲ್ಲಿ ನೀರು ಕೆಳಮಟ್ಟಕ್ಕೆ ಹೋಗಿದೆ. ನಗರಪ್ರದೇಶಗಳಿಗೆ ನೀರು ಪೂರೈಸುವ ನೀರಿನಷ ಶೇಖರಣೆಯಲ್ಲಿಯೂ ಕುಂಠಿತವಾಗಿ ಬವಣೆ ಆರಂಭವಾಗಿದೆ. ಮಾರ್ಚ್, ಎಪ್ರಿಲ್, ಮೇ ತಿಂಗಳಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಬಹುದು, ಜಿಲ್ಲೆಗೆ ನೀರಿನ ಬಹುದೊಡ್ಡ ಸಮಸ್ಯೆಯೂ ಉಂಟಾಗಬಹುದು. ಆದ್ದರಿಂದ ಈಗಿನಿಂದಲೇ ನಗರಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹಾಗೂ ಗ್ರಾಮ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯಿತಿ ಆಸಕ್ತಿ ವಹಿಸಿ ಪರ್ಯಾಯ ನೀರಿನ ಸಂಪನ್ಮೂಲ ವ್ಯವಸ್ಥೆ ಹಾಗೂ ವಿತರಣೆಯನ್ನು ಸಮರ್ಪಕವಾಗಿ ನಡೆಸಲು ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಜಿಲ್ಲಾ ಕಾರ್ಯಾಧ್ಯಕ್ಷ ನಝೀರ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
