UN NEWS NETWORKS
ಉಳ್ಳಾಲ: ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯ, ನಾಲ್ಕು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ , ಮೂರು ಇಂಜಿನಿಯರಿಂಗ್ ಕಾಲೇಜುಗಳ ಸಮೂಹ ಉಳ್ಳಾಲ ತಾಲೂಕಿನಾದ್ಯಂತ ಬೆಳೆದುನಿಂತು ಅಕ್ಷರಷ: ಶೈಕ್ಷಣಿಕ ಹಬ್ ಆಗಿ ಮಾರ್ಪಾಡಾಗಿದೆ. ಮುಡಿಪು ಭಾಗದಲ್ಲಿ ಇನ್ಫೋಸಿಸ್ ಸ್ಥಾಪನೆ ನಂತರ ತಾಲೂಕಿನಲ್ಲಿ ಐಟಿ-ಬಿಟಿಗಳು ಹೆಚ್ಚಾಗಲಿದ್ದು, ಇವುಗಳಿಗೆ ಇನ್ನಷ್ಟು ಗರಿಮೆಯಾಗಿ ಕೊಣಾಜೆಯಲ್ಲಿ ಅಂತರಾಷ್ಟ್ರೀಯ ಸ್ಟೇಡಿಯಂ , ಮುಡಿಪು ಭಾಗದಲ್ಲಿ ಜೈಲು, ಆರ್ ಟಿಓ ಕಚೇರಿ, ನ್ಯಾಯಾಲಯ, ಪತ್ರಿಕಾಭವನವೂ ತಾಲೂಕಿನ ಉದ್ದಕ್ಕೂ ಕಾರ್ಯಾರಂಭಗೊಳ್ಳಿದ್ದು, ತಹಶೀಲ್ದಾರ್ ಡಿ.ಎ ಪುಟ್ಟರಾಜು ನೇತೃತ್ವದಲ್ಲಿ ಸ್ಥಳ ಗುರುತಿಸುವಿಕೆ ವೇಗವನ್ನು ಪಡೆದುಕೊಂಡಿದೆ.
ಮಂಗಳೂರು ನಂತರ ಉಳ್ಳಾಲ ತಾಲೂಕು ಹೈಟೆಕ್ ಸಿಟಿ ಆಗಲಿದೆ. ಅದರಲ್ಲೂ ಮುಡಿಪು ಭಾಗ ಎರಡನೇ ಮಂಗಳೂರು ಆಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ನಾಟೆಕಲ್ ಭಾಗದಲ್ಲಿ ತಾಲೂಕಿನ ತಾತ್ಕಾಲಿಕ ಕಚೇರಿ ಕಾರ್ಯಾಚರಣೆ ನಡೆಸುತ್ತಿದೆ. ಮುಂದಕ್ಕೆ ಅಸೈಗೋಳಿಯಿಂದ ಹಿಡಿದು ಮುಡಿಪು ಭಾಗದವರೆಗೆ ಹಲವು ಸರಕಾರಿ ಕಚೇರಿಗಳು ಸ್ಥಾಪನೆಯಾಗಲಿದೆ. ತಹಶೀಲ್ದಾರ್ ಡಿ.ಎ ಪುಟ್ಟರಾಜು ಅವರು ಬಿಇಒ ಕಚೇರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ನ್ಯಾಯಾಲಯದ ನ್ಯಾಯಧೀಶರುಗಳನ್ನು ಸಂಪರ್ಕಿಸಿ ಸ್ಥಳವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಭಾಗಗಳೆಲ್ಲವೂ ಮುಂದಿನ ಕೆಲವೇ ವರ್ಷಗಳಲ್ಲಿ ಮಹಾನಗರಪಾಲಿಕೆ ಆಗಲಿದೆ. ಮುಡಿಪು ಭಾಗ ನಗರಸಭೆಯಾಗಿ ಕಾರ್ಯಾಚರಣೆಗೊಳ್ಳಲಿದೆ. ಬೆಂಗಳೂರು ನಂತರ ಕೊಣಾಜೆಯಲ್ಲಿ ಅಂತರಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೊಳ್ಳಲಿದ್ದು, ಇದು ತಾಲೂಕಿನ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ಕೊಣಾಜೆ ವ್ಯಾಪ್ತಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆಸುಪಾಸಿನಲ್ಲೇ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿರುವುದರಿಂದ ಕೊಣಾಜೆ ಪ್ರದೇಶ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯಲಿದೆ. ಕೊಣಾಜೆಯ ನಡುಪದವು, ಇರಾ ಪ್ರದೇಶದಲ್ಲಿ ಕೈಗಾರಿಕೆಗೆ ಜಾಗವನ್ನು ಸೀಮಿತಗೊಳಿಸಲಾಗಿದ್ದು, ಈಗಾಗಲೇ ಮೂರು ಕೈಗಾರಿಕೆಗಳು ಆರಂಭಗೊಂಡಿದೆ. ಇರಾ ಸಮೀಪ ಜೈಲು ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, ಮುಡಿಪುವಿನಲ್ಲಿ ನ್ಯಾಯಾಲಯ, ಶಿಕ್ಷಣಾಧಿಕಾರಿಗಳ ಕಚೇರಿ , ಧ್ಯಾನಮಂದಿರದ ಕೆಳಗಡೆ ಸರಕಾರಿ ಗೆಸ್ಟ್ ಹೌಸ್ ಸ್ಥಳ ಗುರುತಿಸುವಿಕೆ ಕಾರ್ಯ ಪೂರ್ಣಗೊಂಡಿದೆ. 3-4 ತಿಂಗಳುಗಳಲ್ಲಿ ಕಾಮಗಾರಿಗಳು ಆರಂಭವಾಗಲಿದೆ.
ತೊಕ್ಕೊಟ್ಟು ಬ್ಯಾರಿ ಭವನಕ್ಕೆ ಮೀಸಲಿಟ್ಟ ಪ್ರದೇಶವನ್ನು ಕೆಎಸ್ ಆರ್ ಟಿಸಿ ನಿಲ್ದಾಣಕ್ಕೆ ನೀಡುವ ಯೋಜನೆಯಿದ್ದು, ಈಗಾಗಲೇ ಕೆಎಸ್ ಆರ್ ಟಿಸಿ ಜಿಲ್ಲಾಧಿಕಾರಿಗಳಿಗೂ ಸ್ಥಳ ನೀಡುವ ಕುರಿತು ಪ್ರಸ್ತಾಪನೆಯನ್ನು ತಹಶೀಲ್ದಾರ್ ಮಾಡಿದ್ದಾರೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಹಶೀಲ್ದಾರ್ ಡಿ.ಎ ಪುಟ್ಟರಾಜು ಟೊಂಕ ಕಟ್ಟಿ ನಿಂತಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಎಲ್ಲಾ ಯೋಜನೆಗಳು ಜಾರಿಯಾದಲ್ಲಿ ಉಳ್ಳಾಲ ತಾಲೂಕು ಮಂಗಳೂರನ್ನು ಹಿಮ್ಮೆಟ್ಟುವುದರಲ್ಲಿ ಸಂಶಯವಿಲ್ಲ ಅನ್ನುವ ಅಭಿಪ್ರಾಯ ತಹಶೀಲ್ದಾರ್ ಅವರದ್ದಾಗಿದೆ. ಮೂಡಬಿದ್ರೆಯಲ್ಲಿ ಸಮಾಜಮುಖಿಯಾಗಿ ತನ್ನ ಕರ್ತವ್ಯ ನಿಭಾಯಿಸಿ ಜನಮೆಚ್ಚುಗೆಗೆ ಪಾತ್ರರಾದ ತಹಶೀಲ್ದಾರ್ , ಇದೀಗ ಉಳ್ಳಾಲ ತಾಲೂಕಿನ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ .