Site icon Ullalavani

ಉಳ್ಳಾಲ ಪ್ರದೇಶದಲ್ಲಿ ಜಾಗವನ್ನು ಹಣವಂತರಿಗೆ ನೀಡಲಾಗಿದೆ: ಕೃಷ್ಣಪ್ಪ ಸಾಲ್ಯಾನ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕೆಲಸ ಬಿಟ್ಟು ನಿವೇಶನಕ್ಕಾಗಿ ಹೋರಾಡುವುದು ವಿಪರ್ಯಾಸ. ಮಧ್ಯಮ ವರ್ಗದವರು ದುಡಿದ ಆದಾಯದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿರುವ ಸಮಯದಲ್ಲಿ ಸರಕಾರ ನಿವೇಶನ ನೀಡದೇ ಇದ್ದಲ್ಲಿ ನಿರಂತರ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಉಳ್ಳಾಲ ವಲಯ ಸಿಪಿಐಎಂ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.

ಅವರು ನಿವೇಶನರಹಿತ ಅರ್ಜಿದಾರರಿಗೆ ಮನೆ ನಿವೇಶನ ನೀಡಲು ಒತ್ತಾಯಿಸಿ ಸಿಪಿಐಎಂ ಉಳ್ಳಾಲ ವಲಯ ವತಿಯಿಂದ ಉಳ್ಳಾಲ ನಗರಸಭೆ ಎದುರು ನಡೆದ ಉಳ್ಳಾಲ ಪುರಸಭೆ ಚಲೋ ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

ಉಳ್ಳಾಲ ಪ್ರದೇಶದಲ್ಲಿ ಜಾಗವನ್ನು ಹಣವಂತರಿಗೆ ನೀಡಲಾಗಿದೆ. ಸಮುದ್ರ ತೀರದ ಜಾಗದಲ್ಲಿ ಸಿಆರ್ ಝೆಡ್ ಕಾನೂನು ಹೇರಿ ಬಡ ವರ್ಗದವರಿಗೆ ಜೀವನ ನಡೆಸಲು ಅಸಾಧ್ಯವಾಗಿದೆ. ದುಬಾರಿ ಬೆಲೆ ಯುಗದಲ್ಲಿ ಜೀವನ ನಡೆಸಲು ಕಷ್ಟಕರವಾಗಿದೆ. ಇನ್ನು ಮನೆ ಖರೀದಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಕೂಡಲೇ ಸರಕಾರ ಎಚ್ಚೆತ್ತು ಬಂದ ಅರ್ಜಿಗಳನ್ನು ತಿರಸ್ಕರಿಸದೆ ನಿವೇಶನ ಒದಗಿಸಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟಗಳು ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಸಿಪಿಐಎಂ ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕಟ್ಟಡ ಕಾರ್ಮಿಕರ ಸಂಘದ ಉಳ್ಳಾಲ ವಲಯ ಕಾರ್ಯದರ್ಶಿ ಜಯಂತ್ ನಾೈಕ್, ಅರುಣ್ ಕುಮಾರ್, ವಿಲಾಸಿನಿ ತೊಕ್ಕೊಟ್ಟು, ಯು.ಬಿ. ಮಾರಪ್ಪ, ರಫೀಕ್ ಹರೇಕಳ, ನಾರಾಯಣ ಬೈಲು, ವಿಶ್ವನಾಥ ಶೆಟ್ಟಿ, ಹರೀಶ್ ಶೆಟ್ಟಿ, ಹರೀಶ್ ಕೆರೆಬೈಲು, ಮಹಾಬಲ.ಟಿ.ದೆಪ್ಪೆಲಿಮಾರ್, ಜನಾರ್ದನ ಕುತ್ತಾರ್, ಶಿವಶಂಕರ್, ದೇವದಾಸ್, ಹರೀಶ್ ಉಳ್ಳಾಲ, ನಳಿನಾಕ್ಷಿ, ರಂಜಿತಾ, ಶಾಂತಿ ಉಳ್ಳಾಲ, ಮಂಜುಳಾ ಉಪಸ್ಥಿತರಿದ್ದರು.

ಅಶೋಕ್ ಶೆಟ್ಟಿ ಚೆಂಬುಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಪದ್ಮಾವತಿ.ಯಸ್.ಶೆಟ್ಟಿ ಸ್ವಾಗತಿಸಿದರು. ರೋಹಿಣಿ ವಂದಿಸಿದರು.

ಪ್ರತಿಭಟನೆಗೆ ಮುನ್ನ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಉಳ್ಳಾಲನಗರಸಭೆ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಯಿತು.

ಬೂಟಾಟಿಕೆಯೋ ನಾಟಕವೋ?
ಮನವಿ ಸ್ವೀಕರಿಸಲು ಬಂದ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಬಾೈ ಮತ್ತು ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ ಅವರನ್ನು ಸಿಪಿಐಎಂ ನಾಯಕರು ಪ್ರಶ್ನಿಸಿದರು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ ಉಳ್ಳಾಲ ನಗರಸಭೆಯಲ್ಲಿ ಬಡ ನಿವೇಶನ ರಹಿತರಿಗೆ ಜಾಗ ನೀಡಲು ನಿವೇಶನ ಖಾಲಿಯಿಲ್ಲ ಎನ್ನುತ್ತೀರಿ. ಖಾಸಗಿ ಹಣವುಳ್ಳವರಿಗೆ ಎಲ್ಲೆಡೆ ಜಾಗ ನೀಡಿದ್ದೀರಿ. ಇದು ಬೂಟಾಟಿಕೆಯೋ ಅಥವಾ ನಾಟಕವೋ ಎಂದ ಅವರು ಒಂಭತ್ತುಕೆರೆ ಆಶ್ರಯ ಯೋಜನೆ ಹೆಸರಿನಲ್ಲಿ ಜಾಗವನ್ನು ಲೂಟಿಗೈದಿರುವ ಚರ್ಚೆ ಆಗಬೇಕು. ಜಿಲ್ಲೆಯಾದ್ಯಂತ ನಿವೇಶನ ರಹಿತರ ಹಿತಕ್ಕಾಗಿ ಆ.14 ರಂದು ರಾತ್ರಿ 12ರವರೆಗೆ ಜಿಲ್ಲಾಧಿಕಾರಿ ಕಚೇರಿಯೆದುರು ಐತಿಹಾಸಿಕ ಧರಣಿ ನಡೆಸಲಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ ಅವರು 2003 ರಲ್ಲಿ ನಿವೇಶನ ರಹಿತರ 1,412 ಅರ್ಜಿಗಳು, 2004 ರಲ್ಲಿ 2,417 ಅರ್ಜಿಗಳು ಈವರೆಗೆ ಒಟ್ಟು 3,400 ಅರ್ಜಿಗಳು ನಗರಸಭೆಗೆ ಬಂದಿವೆ. ಮೊದಲು ಸಲ್ಲಿಸಿರುವ ಅರ್ಜಿಗಳ ಪಟ್ಟಿ ತಯಾರಿಸಿ ದಾಖಲಿಸಿಡಲಾಗಿದೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದ ಸಮಸ್ಯೆ ಇರುವುದರಿಂದ ಜಿಲ್ಲಾಧಿಕಾರಿ, ತಹಶೀಲ್ದಾರರ, ಗ್ರಾಮ ಕರಣಿಕರ ಜತೆಗೆ ಚರ್ಚಿಸಿ ಖಾಸಗಿ ಜಮೀನು ಪಡೆದುಕೊಳ್ಳುವ ನಿರ್ಧಾರಕ್ಕೆ ಬರಬೇಕಿದೆ. ಆದರೆ ದುಬಾರಿ ಜಮೀನು ಪಡೆದುಕೊಳ್ಳುವ ಸಾಧ್ಯ-ಅಸಾಧ್ಯಗಳು ಚರ್ಚೆ ನಡೆಯಬೇಕಿದೆ. ಒಂಭತ್ತುಕೆರೆ ಆಶ್ರಯ ಯೋಜನೆ ಪ್ರಕರಣದ ವಿಚಾರಣೆ ಹೈಕೋರ್ಟಿನಲ್ಲಿ ಅಂತಿಮ ಹಂತಕ್ಕೆ ಬಂದಿದೆ ಎಂದರು.

Exit mobile version