ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿಗಾಗಿ ನಡೆಯುವ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಪ್ರಕ್ರಿಯೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಸೋಮವಾರ ಆರಂಭಗೊಂಡಿದ್ದು, ಆ.1 ರವರೆಗೆ ನಡೆಯಲಿದೆ.
ಸೋಮವಾರ ವಿಜ್ಞಾನ ನಿಕಾಯದ ರಸಾಯನ ಶಾಸ್ತ್ರ, ಕೈಗಾರಿಕ ರಸಾಯನ ಶಾಸ್ತ್ರ, ಸಾವಯವ ರಸಾಯನ ಶಾಸ್ತ್ರ, ಅನ್ವಯಿಕ ರಸಾಯನ ಶಾಸ್ತ್ರ, ಬೌತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಇಲೆಕ್ಟ್ರಾನಿಕ್ಸ್ ವಿಭಾಗ, ಸಾಗರ ಭೂವಿಜ್ಞಾನ ವಿಭಾಗ,ಅನ್ವಯಿಕ ಸಸ್ಯಶಾಸ್ತ್ರ, ಅನ್ವಯಿಕ ಪ್ರಾಣಿಶಾಸ್ತ್ರ, ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ, ಸೂಕ್ಷಾಣು ಜೀವಶಾಸ್ತ್ರ, ಜೀವ ರಸಾಯನಶಾಸ್ತ್ರ, ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವಸ್ತು ವಿಜ್ಞಾನ, ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗಗಳಿಗೆ ವಿದ್ಯಾರ್ಥಿಗಳ ಕೌನ್ಸಲಿಂಗ್ ನಡೆಯಿತು.
ರಸಾಯನ ಶಾಸ್ತ್ರ ಹಾಗೂ ಬೌತಶಾಸ್ತ್ರ ವಿಭಾಗಗಳ ಕೌಂಟರ್‍ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಎರಡು ವಿಷಯಗಳಿಗೆ ಹೆಚ್ಚಿನ ಬೇಡಿಕೆ ಇದ್ದಂತೆ ಕಂಡಿತು.
ಒಳಗೆ ಕೌನ್ಸೆಲಿಂಗ್ ಹೊರಗೆ ಎಬಿವಿಪಿಯಿಂದ ಪ್ರತಿಭಟನೆ
ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಸೋಮವಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತಿದ್ದರೆ ಅದೇ ಸಂದರ್ಭದಲ್ಲಿ ಮಂಗಳಾ ಸಭಾಂಗಣದ ಹೊರಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ಆಶ್ರಯದಲ್ಲಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಶುಲ್ಕ ಇಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮಂಗಳೂರು ವಿಶ್ವವಿದ್ಯಾನಿಲಯವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ತನ್ನ ಮೆರಿಟ್ ಕೋಟಾದ ಶುಲ್ಕವನ್ನು ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಆದರೆ ವಿಶ್ವವಿದ್ಯಾನಿಲಯವು ಮೆರಿಟ್ ಕೋಟಾದ ಶುಲ್ಕದ ಜೊತೆಯಲ್ಲೇ ಏರಿಕೆ ಮಾಡಲಾಗಿದ್ದ ಸ್ವ ವಿತ್ತೀಯ ಕೋಟದ ಶುಲ್ಕವವನ್ನು ಇಳಿಕೆ ಮಾಡದೆ ಬಡ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದು ಖಂಡನೀಯವಾಗಿದೆ ಎಂದು ಆರೋಪಿಸಿದರು.
ಸ್ವ-ವಿತ್ತೀಯ ಕೋಟಾದಡಿ ವಿದ್ಯಾರ್ಥಿಗಳು ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರಕೋರ್ಸುಗಳಿಗೆ ಪ್ರವೇಶಾಕಾತಿ ಪಡೆಯಬೇಕಾದರೆ ಈಗಿನ ಶುಲ್ಕ ಪದ್ದತಿಯಂತೆ 48,795 ರೂಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ, ಕಳೆದ ವರ್ಷವಿದ್ದ 39,280 ರೂಗಳ ಶುಲ್ಕಕ್ಕಿಂತ 9,515 ರೂಗಳನ್ನು ಈ ವರ್ಷ ಹೆಚ್ಚಿಸಲಾಗಿದೆ. ಭೌತಶಾಸ್ತ್ರ ವಿಭಾಗದ ಸ್ವವಿತ್ತೀಯ ಶುಲ್ಕವನ್ನು ಕಳೆದ ವರ್ಷದ 41,280 ರೂಗಳಿಂದ 51,795 ರೂಗಳಿಗೆ ಏರಿಕೆ ಮಾಡಲಾಗಿದೆ. (10,515 ರೂ ಏರಿಕೆ). ಗಣಿತಶಾಸ್ತ್ರದ ಸ್ವ-ವಿತ್ತೀಯ ಶುಲ್ಕವನ್ನು 43,280 ರೂಗಳಿಂದ 53,795 ರೂಗಳಿಗೆ ಏರಿಕೆ ಮಾಡಲಾಗಿದೆ. (10,151 ರೂ ಏರಿಕೆ) ಕಂಪ್ಯೂಟರ್ ಸೈನ್ಸ್ ಮತ್ತು ದೈಹಿಕ ಶಿಕ್ಷಣ ಕೋರ್ಸುಗಳ ಸ್ವ-ವಿತ್ತೀಯ ಶುಲ್ಕವನ್ನು 45,280 ರೂಗಳಿಂದ 53,795 ರೂಗಳಿಗೆ ಏರಿಕೆ ಮಾಡಲಾಗಿದೆ. (8,515 ರೂ ಏರಿಕೆ)
ಮೆರಿಟ್ ಕೋಟಾದ ಅಡಿ ಎಲ್ಲರಿಗೂ ಪ್ರವೇಶ ಸಿಗಲು ಸಾಧ್ಯವಿರದ ಕಾರಣ ಸ್ವ-ವಿತ್ತೀಯ ಕೋಟದಡಿ ಪ್ರವೇಶ ಭಯಸುವ ಬಡ-ಪ್ರತಿಭಾವಂತ ವಿದ್ಯಾರ್ಥಿಗಳು ಈ ಹಿಂದಿನ ವರ್ಷವಿದ್ದ ದುಬಾರಿ ಶುಲ್ಕವನ್ನೇ ಭರಿಸಲು ಕಷ್ಟವಾದ ಪರಿಸ್ಥಿತಿ ಇತ್ತು. ಪ್ರಸಕ್ತ ವರ್ಷ ಶುಲ್ಕ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವುದರಿಂದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದರಲ್ಲಿ ಸಂದೇಹವಿಲ್ಲ ಹಾಗೂ ವಿಶ್ವವಿದ್ಯಾನಿಲಯದ ಉನ್ನತ ಶಿಕ್ಷಣವು ಹಣವಂತರ ಸ್ವತ್ತಾದಂತಾಗುತ್ತದೆ.
ಆದ್ದರಿಂದ, ಮೆರಿಟ್ ಕೋಟಾದ ಶುಲ್ಕವನ್ನು ಇಳಿಸಿದಂತೆ ವಿಶ್ವವಿದ್ಯಾನಿಲಯವು ಸ್ವ-ವಿತ್ತೀಯ ಶುಲ್ಕಗಳನ್ನು ಇಳಿಕೆ ಮಾಡಬೇಕೆಂದು ಎ.ಬಿ.ವಿ.ಪಿ ಆಗ್ರಹಿಸುತ್ತವೆ ಇಲ್ಲವಾದಲ್ಲಿ ಬಡ- ಪ್ರತಿಭಾವಂತ ಪರವಾಗಿ ಎಬಿವಿಪಿ ಉಗ್ರ ಹೋರಾಟ ನಡೆಸುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿಯ ನಗರ ಕಾರ್ಯದರ್ಶಿ ಜಯೇಶ್ ಪಿ.ಕೆ, ರಾಜ್ಯ ಕಾರ್ಯಕಾರಿಣಿ ಸಮಿತಿಯ ಪ್ರಜ್ವಲ್, ಸರ್ವ ಕಾಲೇಜು ಸಂಘದ ಲೋಹಿತ್ ಮುಂತಾದವರು ಉಪಸ್ಥಿತರಿದ್ದರು.