Site icon Ullalavani

ನ.6 ರಂದು ಮುಡಿಪುವಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ.ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಕುಲಾಲ ಸಮುದಾಯ ಭವನದ ಉದ್ಘಾಟನೆ

UN networks

ಮುಡಿಪು: ಕುಲಾಲ ಸಮಾಜದ ಹಿರಿಯರು, ಮುಖಂಡರು ಕುಲಾಲ ಸಮಾಜದ ಅಭಿವೃದ್ಧಿ ಹಾಗೂ ಸಂಘಟನಾತ್ಮಕ ಉದ್ದೇಶದಿಂದ ಮುಡಿಪು ಪರಿಸರದ ಕುಲಾಲ ಬಾಂಧವರನ್ನು ಒಟ್ಟು ಸೇರಿಸಿ 1973 ರಲ್ಲಿ ಕುಲಾಲ ಸಂಘವನ್ನು ಹುಟ್ಟುಹಾಕಿದರು. ಅಂದಿನಿಂದ ಇಂದಿನವರೆಗೆ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿರುವ ಮುಡಿಪು ಕುಲಾಲ ಸಂಘ(ರಿ)ವು , ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ 100 ನೇ ಜನ್ಮವರ್ಷಾಚರಣೆಯೊಂದಿಗೆ ಮುಡಿಪುವಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ.ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ನೂತನ ಕುಲಾಲ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮವು 2022 ರ ನವೆಂಬರ್ 6 ರಂದು ನಡೆಯಲಿದೆ ಎಂದು ಕುಲಾಲ ಸಂಘ(ರಿ) ಮುಡಿಪು ಇದರ ಅಧ್ಯಕ್ಷರಾದ ಪುಂಡರೀಕಾಕ್ಷ ಅವರು ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಬೆಳಿಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಡೆ ಅವರ ಶುಭಾಶೀರ್ವಾದೊಂದಿಗೆ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ ಅವರು ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಕುಲಾಲ ಸಂಘ ಮುಡಿಪು ಇದರ ಮಾಜಿ ಅಧ್ಯಕ್ಷರಾದ ಶ್ರೀ ವೆಂಕಪ್ಪ ಮಾಸ್ತರ್ ಅಸೈಗೊಳಿ ಅವರು ಉಪಸ್ಥಿತರಿರಲಿದ್ದಾರೆ. ಕುಲಶೇಖರ ವೀರನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಸುಂದರ ಕುಲಾಲ್ ಶಕ್ತಿನಗರ ಅವರು ವೀರನಾರಾಯಣ ದೇವರ ಚಿತ್ರಕ್ಕೆ ಪುಷ್ಪ ಮಾಲಾರ್ಚಣೆ ಮಾಡಲಿದ್ದು, ಡಾ.ಅಮ್ಮೆಂಬಳ ಬಾಳಪ್ಪ ಅವರ ಭಾವಚಿತ್ರವನ್ನು ನಿವೃತ್ತ ತಹಶೀಲ್ದಾರರಾದ ಬಿ.ಎಸ್.ಕುಲಾಲ್, ಕುರ್ನಾಡು ಪಂಚಾಯತ್ ಅಧ್ಯಕ್ಷರಾದ ಗಣೇಶ್ ನಾಯ್ಕ್ , ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ.ರಾಜಾರಾಂ ಭಟ್ ಅವರು ಅನಾವರಣಗೊಳಿಸಲಿದ್ದಾರೆ.
ಸಭಾ ಕಾರ್ಯಕ್ರಮ:
ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭೆಯನ್ನು ಸಂಸದರಾದ ನಳಿನ್ ಕುಮಾರ್‌ ಕಟೀಲ್ ಅವರು ಉದ್ಘಾಟಿಸಲಿದ್ದು, ಕುಲಾಲ ಸಂಘ(ರಿ) ಮುಡಿಪು ಇದರ ಅಧ್ಯಕ್ಷರಾದ ಪುಂಡರೀಕಾಕ್ಷ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯು.ಟಿ.ಖಾದರ್, ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಮುಖಂಡರಾದ ಸುರೇಶ್ ಕುಲಾಲ್, ಕಸ್ತೂರಿ ಪಂಜ, ರೂಪಾ ಡಿ ಬಂಗೇರ, ಕಮಲಾಕ್ಷಿ ಕೆ. ಕಾಸರಗೋಡು, ಮಮತಾ ಗಟ್ಟಿ, ಪ್ರಶಾಂತ್ ಕಾಜವ, ಪುರುಷೋತ್ತಮ ಕಲ್ಬಾವಿ, ಭಾಸ್ಕರ ಎಂ ಪೆರುವಾಯಿ, ಯಜ್ಞೇಶ್ ಬರ್ಕೆ, ರಾಮ ಯು, ನವೀನ್ ಪಾದಲ್ಪಾಡಿ, ರವೀಂದ್ರ ಮುನ್ನಿಪ್ಪಾಡಿ, ಸುಕುಮಾರ್, ಪುರಂದರ, ಚೆನ್ನಪ್ಪ ಗೌಡ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ವೆಂಕಪ್ಪ ಮಾಸ್ಟರ್ ಅಸೈಗೋಳಿ, ಡಾ.ರಶ್ಮೀ ಅಮ್ಮೆಂಬಳ, ಡಾ.ಸತೀಶ್ ಕೊಣಾಜೆ, ಶ್ರೀಮತಿ ಶಶಿಕಲಾ ಮಂಜನಾಡಿ ಅವರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ ಭೋಜನ ವಿರಾಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ 3 ಗಂಟೆಗೆ ‘ರಾಜ್ಯ ಕಂಡ ಭೂ ಸುಧಾರಣಾ ಮಂಡಳಿಯ ಅಗ್ರಮಾನ್ಯ ಸದಸ್ಯರಾಗಿ ಡಾ.ಅಮ್ಮೆಂಬಳ ಬಾಳಪ್ಪ’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ಡಾ.ದುಗ್ಗಪ್ಪ ಕಜೆಕಾರ್ ಅವರು ಉಪನ್ಯಾಸ ನೀಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸದಾನಂದ ಬಂಗೇರ, ಜೊತೆ ಕಾರ್ಯದರ್ಶಿ ಮೋಹನ್‌ದಾಸ್ ಅಮ್ಮೆಂಬಳ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲ ಬಂಗೇರ ಮಿತ್ತಕೋಡಿ, ಸಂಘದ ಸದಸ್ಯ ಪ್ರಶಾಂತ ಕುಲಾಲ್ ಶಾಂತನಗರ, ಕೃಷ್ಣಪ್ರಸಾದ್ ವಿದ್ಯಾನಗರ, ಜನಾರ್ದನ ಕುಲಾಲ್ ಕೈರಂಗಳ, ಸಂತೋಷ್ ಕುಲಾಲ್ ಮುಡಿಪು ಉಪಸ್ಥಿತರಿದ್ದರು.

ಮುಡಿಪು ಕಾಯೆರ್ ಗೋಳಿ ಕ್ರಾಸ್ ಗೆ ಅಮ್ಮೆಂಬಳ ಬಾಳಪ್ಪ ಹೆಸರು
ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಮಾಜಿಕ ಮುಂದಾಳು ಡಾ.ಅಮ್ಮೆಂಬಳ ಬಾಳಪ್ಪ ಅವರು ಕುರ್ನಾಡು ಅಮ್ಮೆಂಬಳದವರಾಗಿದ್ದು, ಆದ್ದರಿಂದ ಮುಡಿಪು ಕಾಯೆರ್ ಗೋಳಿ ಕ್ರಾಸ್ ಗೆ ಡಾ. ಅಮ್ಮೆಂಬಳ ಬಾಳಪ್ಪ ಕ್ರಾಸ್ ಹೆಸರಿಡಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿದ್ದು, ನಾಡಿದ್ದು ಕಾರ್ಯಕ್ರಮದಲ್ಲಿ ಈ ಬಗ್ಗೆ ಸಚಿವರ ಮೂಲಕ ಸರಕಾರಕ್ಕೆ ಮನವಿ ಮಾಡಲಿದ್ದೇವೆ.
ಪುಂಡಾರಿಕಾಕ್ಷ
ಮುಡಿಪು ಕುಲಾಲ ಸಂಘದ ಅಧ್ಯಕ್ಷರು

Exit mobile version