UN networks
ಮಂಗಳೂರು: ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಕಾಲ ಜಾತಿ ಮತ್ತು ಆದಾಯ ದೃಢಪತ್ರ ನೀಡದೇ ಸತಾಯಿಸಿದ ಮಂಗಳೂರು ತಾಲೂಕು ಕಚೇರಿ ಸಿಬ್ಬಂದಿ ವಿರುದ್ದ ಆಕ್ರೋಶದಿಂದ ಬೈದುದಕ್ಕೆ ಜೈಲುಪಾಲಾದ ದಂಪತಿಗೆ ಜೆಎಂಎಫ್ ಸಿ ಎರಡನೇ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿ ದಂಪತಿ ಪರ ಮಂಗಳೂರಿನ ಖ್ಯಾತ ನ್ಯಾಯವಾದಿ ಮೋಹನ್ ದಾಸ್ ರೈ ವಾದಿಸಿದ್ದರು.
ಕೊಂಚಾಡಿ ಯೆಯ್ಯಾಡಿ ಪದವು ನಿವಾಸಿ ಮ್ಯಾಕ್ಸಿಂ ಜೋಸೆಫ್ ನೊರೊನ್ಹಾ ಮತ್ತು ಸುನೀತಾ ಮರೀನಾ ನೊರೊನ್ಹಾ ದಂಪತಿ ಜಾಮೀನು ಪಡೆದುಕೊಂಡವರು. ತಾಲೂಕು ಕಚೇರಿ ಸಿಬ್ಬಂದಿ ಕು.ಅಲ್ವಿಶಾ ಪ್ರೆಸಿಲ್ಲಾ ಡಿಸೋಜ ಅವರು ತಹಸೀಲ್ದಾರ್ ಪುರಂದರ ಹೆಗ್ಡೆ ಅವರಲ್ಲಿ ದಂಪತಿ ವಿರುದ್ಧ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ದೈಹಿಕ ಹಲ್ಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ನ್ಯಾಯಾಲಯದ ಪ್ರಕ್ರಿಯೆಯಂತರ ಮ್ಯಾಕ್ಸಿಂ ಜೋಸೆಫ್ ನೊರೊನ್ಹಾ- ಸುನೀತಾ ದಂಪತಿ ಜ್ಯುಡಿಷಿಯಲ್ ಕಸ್ಟಡಿಗೆ ನೀಡಲಾಗಿತ್ತು.
ಪ್ರಕರಣದ ವಿವರ: ಸರಕಾರದ ಸ್ಕಾಲರ್ ಶಿಪ್ ಗೆಂದು ತನ್ನ ಇಬ್ಬರು ಮಕ್ಕಳಿಗೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರದ ಅಗತ್ಯವಿದ್ದುದರಿಂದ ತಾಲೂಕು ಕಚೇರಿಗೆ ಸೆ.26 ರಂದು ದಂಪತಿ ಅರ್ಜಿ ಸಲ್ಲಿಸಿದ್ದರು. ಸೆ.30 ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾದುದರಿಂದ ಕಚೇರಿ ಕು.ಅಲ್ವಿಶಾ ಪ್ರೆಸಿಲ್ಲಾ ಡಿಸೋಜ ಅವರಲ್ಲಿ ದಂಪತಿ ಎರಡು ದಿನಗಳೊಳಗೆ ನೀಡುವಂತೆ ವಿನಂತಿಸಿದ್ದರು. ಅದರಂತೆ ದಂಪತಿ ಅರ್ಜಿ ನೀಡಿದ ಸೆ.26,27,28,29 ನಾಲ್ಕು ದಿನಗಳ ಕಾಲ ನಿತ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ದೃಢೀಕರಣಪತ್ರ ಕೇಳಿದ್ದರು. ಆದರೆ ಸೆ.29 ರಂದು ಫೈಲನ್ನು ಟೇಬಲ್ ನಲ್ಲಿಯೇ ಇರಿಸಿದ್ದ ಸಿಬ್ಬಂದಿ ಅಲ್ವಿಶಾ ವಿರುದ್ದ ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಗಾಗಿ ಸಲ್ಲಿಸುವ ದೃಢೀಕರಣ ಪತ್ರವನ್ನು 48 ಗಂಟೆಗಳ ಒಳಗೆ ನೀಡುವಂತೆ ಸರಕಾರಿ ಆದೇಶವನ್ನೂ ಪ್ರಸ್ತಾಪಿಸಿದ್ದಾರೆ. ಅವೆಲ್ಲವನ್ನೂ ಗಾಳಿಗೆ ತೂರಿದ ಸಿಬ್ಬಂದಿ ದಂಪತಿ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ. ಘಟನೆಯಿಂದ ವಿದ್ಯಾರ್ಥಿಗಳಿಬ್ಬರಿಗೆ ನ್ಯಾಯಯುತವಾಗಿ ಸಿಗಬೇಕಾದ ಸ್ಕಾಲರ್ ಶಿಪ್ ಕಚೇರಿ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕೈತಪ್ಪಿಹೋಗಿದೆ. ಅ.1 ರಂದು ಮಕ್ಕಳಿಬ್ಬರೂ ಎದುರಿಸಬೇಕಾದ ಪರೀಕ್ಷೆಯನ್ನು ಹೆತ್ತವರ ಬಂಧನದಿಂದ ಓದಲು ಗಮನ ಕೊಡಲಾಗದೆ ಆಘಾತದಲ್ಲಿ ಎದುರಿಸುವಂತೆ ಆಯಿತು. ಈ ಕುರಿತು ನ್ಯಾಯಾಲಯದಲ್ಲಿ ವಾದಿಸಿದ ವಕೀಲರಾದ ಮೋಹನ್ ದಾಸ್ ರೈ ಅವರ ವಾದಕ್ಕೆ ಮಾನ್ಯ ನ್ಯಾಯಧೀಶರು ಅಮಾಯಕ ದಂಪತಿಗೆ ಜಾಮೀನು ನೀಡುವ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ.
ದಂಪತಿ ಬಿಡುಗಡೆ
ದೂರುದಾರ ತಹಶೀಲ್ದಾರ್ ಜೈಲುಪಾಲು!
ನ್ಯಾಯಾಲಯದಿಂದ ದಂಪತಿಗೆ ಜಾಮೀನು ಸಿಗುತ್ತಿದ್ದಂತೆ ದೂರುದಾರ ಮಂಗಳೂರು ತಾಲೂಕು ತಹಶೀಲ್ದಾರ್ ಪುರಂದರ್ ಹೆಗ್ಡೆ ಜೈಲುಪಾಲಾಗಿದ್ದಾರೆ. ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದ ತಾಲೂಕು ಕಚೇರಿ ಸಿಬ್ಬಂದಿ ಹೇಳಿಕೆ ಆಧರಿಸಿ ಲೋಕಾಯುಕ್ತರ ವಶಕ್ಕೆ ಬಿದ್ದಿದ್ದ ತಹಸೀಲ್ದಾರ್ ಪುರಂದರ ಹೆಗ್ಡೆ ಇಂದು ಜೈಲುಪಾಲಾಗಿದ್ದಾರೆ. ದಂಪತಿ ನ್ಯಾಯಲಯದಿಂದ ಹೊರಬರುತ್ತಿದ್ದಂತೆ ಪೊಲೀಸರು ತಹಶೀಲ್ದಾರ್ ಪುರಂದರ್ ಹೆಗ್ಡೆಯವರನ್ನು ಜೈಲುಪಾಲಾಗುತ್ತಿರುವುದು
ಕಾಕತಾಳೀಯ.
ಕಂದಾಯ ಇಲಾಖೆಯಲ್ಲಿ ಲಂಚಾವತಾರ ಹೆಚ್ಚಾಗುತ್ತಿದ್ದು, ಎ.ಸಿ ಹಾಗೂ ಡಿ .ಸಿ ಅವರ ಕೈಕೆಳಗಡೆಯೇ ಇಂತಹ ಧೋರಣೆಗಳು ಎದ್ದು ಕಾಣುತ್ತಿರುವುದು ವಿಷಾಧನೀಯ. ಹುಷಾರಿಲ್ಲದ ದಂಪತಿಗೆ ಸತಾಯಿಸಿರುವ ಕೇಸ್ ವರ್ಕರ್ ವಿರುದ್ಧ ಕ್ರಮ ಆಗಬೇಕಿದೆ. ಇಲ್ಲಿ ಕೇಸ್ ವರ್ಕರ್ ಗಳೇ ಜಿಲ್ಲಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ.ಜನಸಾಮಾನ್ಯರಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ. ಈ ಕುರಿತು ಸ್ಥಳೀಯ ಶಾಸಕರು ಹಾಗೂ ಸಂಸದರು ಗಮನಹರಿಸಬೇಕಾಗಿದೆ .
ರಾಜೇಶ್ ನಾಗುರಿ
ಸಾರ್ವಜನಿಕರು
