UN networks
ಉಳ್ಳಾಲ: ಬಸ್ ನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಉಳ್ಳಾಲಬೈಲ್ ನಿವಾಸಿ ವಿದ್ಯಾರ್ಥಿ ಯಶ್ ರಾಜ್ (16) ಅಪಘಾತಕ್ಕೆ ಸಂಬಂಧಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಕಲಂ 279,336,304 ಐಪಿಸಿಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಉಳ್ಳಾಲದಿಂದ ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುವ
ಶಾರ್ಲಿ ಬಸ್ ಚಾಲಕ ಕುಪ್ಪೆಪದವು ನಿವಾಸಿ ಕಾರ್ತಿಕ್ ಶೆಟ್ಟಿ ಹಾಗೂ ನಿರ್ವಾಹಕ ಅಂಬ್ಲಮೊಗರು ಎಲ್ಯಾರ್ ಸೈಟ್ ನ ಸಂಶೀರ್ (30) ಎಂಬವರನ್ನು ಬಂಧಿಸಲಾಗಿದೆ.
ಸೆ.7 ರಂದು ವಿದ್ಯಾರ್ಥಿ ಯಶರಾಜ್ ಬಸ್ಸಿನಲ್ಲಿ ಮುಂದಿನ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಿದ್ದಾಗ ಬಸ್ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯ ತನದಿಂದ ಚಲಾಯಿಸಿದ ಪರಿಣಾಮ ವಿದ್ಯಾರ್ಥಿ ಯಶ್ ರಾಜ್ ರಸ್ತೆಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸೆ.12 ರಂದು ಮಿದುಳು ನಿಷ್ಕ್ರಿಯ ಗೊಂಡ ಹಿನ್ನೆಲೆಯಲ್ಲಿ ಮನೆಮಂದಿ ಅಂಗಾಂಗ ದಾನಕ್ಕೆ ನಿರ್ಧರಿಸಿ ಬಾಲಕನ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಬಾಲಕ ಯಶ್ ರಾಜ್ ಸಾವನ್ನಪ್ಪುತ್ತಿದ್ದಂತೆ ತಾಯಿ ಮಮತಾ ಎಂಬವರು ಮಂಗಳೂರು ದಕ್ಷಿಣ. ಸಂಚಾರಿ ಠಾಣೆಯಲ್ಲಿ ನೀಡಿರುವ ದೂರಿನಾಧಾರದಡಿ ದಾಖಲಾದ ಕಲಂಗಳನ್ನು ಪೊಲೀಸರು ಪರಿವರ್ತಿಸಿಕೊಂಡು ಉಳ್ಳಾಲ ಬಸ್ ನಿಲ್ದಾಣದಿಂದ ಬಸ್ಸಿನ ಇಬ್ಬರು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
