Site icon Ullalavani

ಉಚ್ಚಿಲ ತೀರದಲ್ಲಿ ಕಡಲ್ಕೊರತಕ್ಕೆ ಸಮುದ್ರಪಾಲಾದ ತೆಂಗಿನ ಮರಗಳು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಚ್ಚಿಲ: ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಚ್ಚಿಲದ ನ್ಯೂ ಉಚ್ಚಿಲ ಸಮುದ್ರ ತೀರದಲ್ಲಿ ಕಡಲ್ಕೊರೆತ ಮತ್ತೆ ಆರಂಭಗೊಂಡು ಎರಡು ಮನೆಗಳ ಜಾಗ ಹಾಗೂ ತೆಂಗಿನಮರಗಳು ಸಮುದ್ರಪಾಲಾಗಿವೆ.

ನ್ಯೂಉಚ್ಚಿಲ ಎಂಬಲ್ಲಿರುವ ವಸಂತ ಮತ್ತು ಯಮುನಾ ಎಂಬವರಿಗೆ ಸೇರಿದ ಜಾಗ ಹಾಗೂ 10 ರಷ್ಟು ತೆಂಗಿನ ಮರಗಳು ಸಮುದ್ರ ಕೊರೆತಕ್ಕೆ ಕೊಚ್ಚಿ ಹೋಗಿವೆ. ಗುರುವಾರ ತಡರಾತ್ರಿಯಿಂದ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡು ವಸಂತ್ ಅವರಿಗೆ ಸೇರಿದ ಆರು ಮತ್ತು ಯಮುನಾ ಎಂಬವರಿಗೆ ಸೇರಿದ 4 ರಷ್ಟು ತೆಂಗಿನ ಮರಗಳು ನೀರಿನಲ್ಲಿ ಹೋಗಿವೆ.

ಜನಪ್ರತಿನಿಧಿಗಳು ಭೇಟಿಗೆ ಮಾತ್ರ ಸೀಮಿತ :

2013 ರಲ್ಲಿ ನ್ಯೂಉಚ್ಚಿಲ ಮತ್ತು ಉಚ್ಚಿಲ ಸಮುದ್ರ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿತ್ತು. ಈ ವೇಳೆ ಸಮುದ್ರ ತೀರದಲ್ಲಿದ್ದ ರೆಸಾರ್ಟ್ ಹಾಗೂ ಹಲವು ಮನೆಗಳು ಸಮುದ್ರ ಪಾಲಾಗಿತ್ತು. ಆದರೆ ಜನಪ್ರತಿನಿಧಿಗಳು ಭೇಟಿ ನೀಡದೇ ಇದ್ದ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಸಂಸದ, ಜಿಲ್ಲಾ ಉಸ್ತುವಾರಿ, ಶಾಸಕರು ಭೇಟಿ ನೀಡಿ ತಾತ್ಕಾಲಿಕ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಒಂದು ಭಾಗದಲ್ಲಿ ಕಲ್ಲುಗಳನ್ನು ಹಾಕುವ ಪ್ರಕ್ರಿಯೆ ನಡೆದರೂ, ಕೆಲ ಮನೆಗಳು ಸಂಪೂರ್ಣ ಕೊಚ್ಚಿ ಹೋಗಿ ಅವರು ಸ್ಥಳಾಂತರಗೊಂಡಿದ್ದಾರೆ. ಇದೀಗ ಉಚ್ಚಿಲದಿಂದ ನ್ಯೂಉಚ್ಚಿಲ ಕಡೆಗೆ ಪಥ ಬದಲಾಯಿಸಿರುವ ಸಮುದ್ರದ ಅಲೆಗಳು ಎರಡು ಮನೆಗಳು ಅಪಾಯದಲ್ಲಿವೆ.

`ಜನಪ್ರತಿನಿಧಿಗಳು ಭೇಟಿ ನೀಡಿದರೂ ಯಾವುದೇ ಸ್ಪಂಧನೆ ಸಿಗುವುದಿಲ್ಲ. ಬಂದು ನೋಡಿ ಹೋದರೆ ಹೋದ ಮನೆ ಸಿಗುವುದಿಲ್ಲ. ಸಂಬಂಧಪಟ್ಟ ಇಲಾಖೆಯಿಂದ ಸಿಗುವ ಪರಿಹಾರ ಮನೆಯ ದುರಸ್ತಿಗೆ ಸಾಲದು. ಕೂಡಲೇ ತಾತ್ಕಾಲಿಕ ಪರಿಹಾರವಾಗಿ ಕಲ್ಲುಗಳನ್ನು ಹಾಕದೇ ಇದ್ದಲ್ಲಿ ಎಲ್ಲರೂ ಬೀದಿಪಾಲಾಗುತ್ತೇವೆ ಎಂದು ವಸಂತ್ ಹೇಳಿದ್ದಾರೆ.

ಹಲವು ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದೇವೆ. ಮುಕ್ಕಾಲಾಂಶ ಜಾಗ ಸಮುದ್ರ ಪಾಲಾಗಿವೆ. ಮಕ್ಕಳಂತೆ ಕಂಡ ತೆಂಗಿನಮರಗಳೆಲ್ಲವೂ ಸಮುದ್ರಪಾಲಾಗಿವೆ. ಮನೆಯಲ್ಲಿ ದುಡಿಯುವವರೂ ಇಲ್ಲ. ಬೇರೆ ಜಾಗ ಖರೀದಿ ಮಾಡಿ ಮನೆ ಕಟ್ಟೋಣವೆಂದರೆ ಅದು ಅಸಾಧ್ಯದ ಮಾತು. ಜನಪ್ರತಿನಿಧಿಗಳು ಎಲ್ಲಿಯಾದರೂ ಸರಕಾರಿ ಜಾಗವನ್ನು ನೀಡಿ ಸಹಕರಿಸಬೇಕು ಎಂದು ಹಿರಿಯರಾದ ಕಮಲಾ ಕಣ್ಣೀರು ಹಾಕಿ ಪ್ರತಿಕ್ರಿಯಿಸಿದರು.

Exit mobile version