UN NEWS NETWORKS
ಉಳ್ಳಾಲ: ಉಳ್ಳಾಲ ನಿವಾಸಿ ಅವಿವಾಹಿತ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮುಂಬೈನ ವಸಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಕಾಂಡ್ ಸಮೀಪದ ಚರಂಡಿಯಲ್ಲಿ ಪತ್ತೆಯಾಗಿದೆ. ಆ.೨೯ ರಿಂದ ನಾಪತ್ತೆಯಾಗಿದ್ದ ಇವರ ಕುರಿತು ವಸಾಯ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಕೊಲೆಯೋ ಆತ್ಮಹತ್ಯೆಯೋ ಅನ್ನುವ ಶಂಕೆ ಇದೆ.
ಉಳ್ಳಾಲದ ಬಂಡಿಕೊಟ್ಯ ಶಿವಗಂಗಾ ಮನೆ ನಿವಾಸಿ ದಿ.ಸುಂದರ್ ಹಾಗೂ ನಿವೃತ್ತ ಮೆಸ್ಕಾಂ ಸಿಬ್ಬಂದಿ ಮಾಲತಿ ದಂಪತಿ ಪುತ್ರ ಸುಧೀರ್ ಕುಮಾರ್ (೩೪) ಮೃತದೇಹ ಪತ್ತೆಯಾಗಿದೆ. ವಸಾಯಿಯಲ್ಲಿರುವ ಅಬ್ಕೋ ಪ್ರೈವೇಟ್ ಲಿ. ಸಂಸ್ಥೆಯಲ್ಲಿ ಕಳೆದ ೧೫ ವರ್ಷಗಳಿಂದ ಸುಧೀರ್ ದುಡಿಯುತ್ತಿದ್ದರು. ಆ.೧೪ ರಂದು ಬೆಳಿಗ್ಗೆ ವಾಸಾಯ್ ನಿವಾಸಿ ಸ್ನೇಹಿತ ಭಾಸ್ಕರ್ ಎಂಬವರ ಮನೆಗೆ ತೆರಳಿದ್ದ ಸುಧೀರ್ ಖಿನ್ನತೆಯಲ್ಲಿದ್ದರು. ತನಗೆ ಜೀವಬೆದರಿಕೆಯಿದೆ, ಹಲ್ಲೆ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದೆಲ್ಲಾ ಭಾಸ್ಕರ್ ಬಳಿ ಅಲವತ್ತುಕೊಂಡಿದ್ದರು ಎನ್ನಲಾಗಿದೆ. ನಂತರ ಅಲ್ಲಿಂದ ಇನ್ನೋರ್ವ ಸ್ನೇಹಿತ ಜೀವನ್ ಎಂಬವರಿಗೆ ಕರೆ ಮಾಡಿ ʻ ತನ್ನ ರೂಮಿನಲ್ಲಿ ಎರಡು ದಿನಗಳಿಂದ ವಿದ್ಯುತ್ ಇಲ್ಲ. ಉಳಿಯಲು ಹೆದರಿಕೆಯಾಗುತ್ತಿದೆ. ಕೆಲಸಕ್ಕೆ ರಜೆಯಿದೆ. ಮೊಬೈಲಿನಲ್ಲಿಯೂ ಚಾರ್ಜ್ ಇಲ್ಲ. ನಿನ್ನ ರೂಮಿಗೆ ಬರುತ್ತಿದ್ದೇನೆʼ ಎಂದು ತಿಳಿಸಿದ್ದರು. ಬಳಿಕ ಮೊಬೈಲ್ ಕೂಡಾ ಸ್ವಿಚ್ಡ್ ಆಫ್ ಆಗಿತ್ತು. ಜೀವನ್ ಮತ್ತೆ ಸುಧೀರ್ ಮೊಬೈಲಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿಯೇ ಉಳಿದಿತ್ತು. ಆ.೧೪ ಭಾನುವಾರ ಹಾಗೂ ಆ.೧೫ ಕೆಲಸಕ್ಕೆ ರಜೆಯಿದ್ದು, ಆ. ೧೬ ರಂದು ಸುಧೀರ್ ಸಂಸ್ಥೆಗೆ ಕೆಲಸಕ್ಕೆ ಬಾರದ ಕಾರಣ ಅಂದು ಸಂಜೆ ಸಂಸ್ಥೆ ಪ್ರಬಂಧಕರು ಮನೆಮಂದಿಗೆ ವಿಚಾರ ತಿಳಿಸಿದ್ದರು. ಮನೆಮಂದಿ ಮುಂಬೈಗೆ ತೆರಳಿ ಬಳಿಕ ವಸಾಯ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಒಂದು ವಾರದವರೆಗೂ ಪ್ರಕರಣ ಕುರಿತು ಪೊಲೀಸರು ವಿಚಾರಣೆ ನಡೆಸಲು ಮುಂದಾಗದೇ ಇದ್ದಾಗ, ಸಂಸ್ಥೆ ಪ್ರಬಂಧಕರು ಕ್ರೈಂ ದಳಕ್ಕೆ ಪ್ರಕರಣ ವರ್ಗಾಯಿಸುವಂತೆ ಒತ್ತಡ ಹೇರಿದ್ದಾರೆ. ಅಲ್ಲಿ ಮೊಬೈಲ್ ನೆಟ್ವರ್ಕ್ ದಾಖಲೆಯನ್ನು ಪಡೆದಾಗ ಫೋನ್ ಸ್ವಿಚ್ ಆಫ್ ಆಗುವ ಮುನ್ನ ಸ್ನೇಹಿತರುಗಳಾದ ಭಾಸ್ಕರ್ ಹಾಗೂ ಜೀವನ್ ಅವರಿಗೆ ಕರೆ ಮಾಡಿರುವುದು ತಿಳಿದುಬಂದಿತ್ತು. ಇದೀಗ ೧೨ ದಿನಗಳ ಬಳಿಕ ಸುಧೀರ್ ಕುಮಾರ್ ಮೃತದೇಹ ತಾನಿದ್ದ ರೂಮಿನ ೫ ಕಿ.ಮೀ ವ್ಯಾಪ್ತಿಯಲ್ಲಿ ಬರುವ ಬೃಹತ್ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಕಿಸೆಯಲ್ಲಿದ್ದ ವೋಟರ್ ಐಡಿ ಹಾಗೂ ಕುಟುಂಬದ ಜತೆಗಿನ ಭಾವಚಿತ್ರದಿಂದ ಸ್ಥಳದಲ್ಲಿ ಗುರುತುಪತ್ತೆಯಾಗಿದೆ. ಸುಧೀರ್ ಅವರು ಹಣವನ್ನು ವ್ಯಕ್ತಿಯೋರ್ವರಿಗೆ ಸಾಲವಾಗಿ ನೀಡಿದ್ದು ಅದನ್ನು ವಾಪಸ್ಸು ಮಾಡದೇ ಇರುವ ಕುರಿತು ತಗಾದೆಯಿದ್ದು, ಇದರಿಂದ ಅಪರಾಧ ಕೃತ್ಯ ನಡೆದಿರುವ ಸಂಶಯವನ್ನು ಆಪ್ತ ಮೂಲಗಳು ವ್ಯಕ್ತಪಡಿಸಿದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವುದು ಶವ ಮಹಜರು ನಡೆಸಿದ ಬಳಿಕ ಅಂತಿಮ ಸಂಸ್ಕಾರವನ್ನು ಮುಂಬೈನಲ್ಲೇ ನೆರವೇರಿಸಲಾಗಿದೆ. ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.