Site icon Ullalavani

ಒಂಭತ್ತು ಮಾಗಣೆ ಸೀಮೆ ಗಟ್ಟಿಯವರಿಂದ
ಶ್ರೀ ಸೋಮನಾಥ ದೇವರಿಗೆ ಸೀಯಾಳಾಭಿಷೇಕ

UN NEWS NETWORKS
ಉಳ್ಳಾಲ: ಶ್ರಾವಣ ಮಾಸದಲ್ಲಿ ಗಟ್ಟಿ ಸಮಾಜ ಬಾಂಧವರ ಕುಲದೈವ ಸೋಮನಾಥನಿಗೆ ಬೊಂಡಾಭಿಷೇಕ ನಡೆಸುವುದು ಹಿರಿಯರಿಂದ ಬಂದ ಸಂಪ್ರದಾಯ, ಅದರಂತೆ ಒಂಭತ್ತು ಮಾಗಣೆಯವರು ಜೊತೆಗೂಡಿ ಒಗ್ಗಟ್ಟಿನಿಂದ ದೇವರ ಸೇವೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಗಟ್ಟಿ ಸಮಾಜದ ಮಾತೃಸಂಘ ಅಧ್ಯಕ್ಷ ದಯಾನಂದ ಗಟ್ಟಿ ಪಿಲಿಕೂರು ಹೇಳಿದರು.

ಒಂಭತ್ತು ಮಾಗಣೆ ಸೀಮೆ ಗಟ್ಟಿಯವರ ಕುಲಸ್ವಾಮಿ ಶ್ರೀ ಸೋಮನಾಥ ಸೇವಾ ಸಮಿತಿ ವತಿಯಿಂದ ಸೋಮೇಶ್ವರದ ಶ್ರೀ ಸೋಮನಾಥ ದೇವರಿಗೆ ಸೀಯಾಳಾಭಿಷೇಕದಲ್ಲಿ ಭಾಗವಹಿಸಿ ಮಾತನಾಡಿದರು.
ಆಷಾಢ ಕಳೆದ ನಂತರ ಶ್ರಾವಣ ಮಾಸದಲ್ಲಿ ತುಳುನಾಡಿನಲ್ಲಿ ದೈವ ದೇವರುಗಳ ಎಲ್ಲಾ ಕಾರ್ಯಕ್ರಮಗಳು ಆರಂಭವಾಗುತ್ತದೆ. ಮಳೆ ಬಾರದ ಸಮಯದಲ್ಲಿ ಸೋಮನಾಥನಿಗೆ ಬೊಂಡಾಭಿಷೇಕ ನಡೆಸಿ ಮಳೆ ಬಂದಂತಹ ಇತಿಹಾಸವಿದೆ. ಕೊಡೆ ಹಿಡಿದುಕೊಂಡು ಬಂದು ದೃಢವಿಶ್ವಾಸದಲ್ಲಿ ಬೊಂಡಾಭಿಷೇಕ ನಡೆಸಿ ಹೋದಾಗ ಮಳೆ ಬಂದಿದೆ. ಅತಿವೃಷ್ಠಿ ಅನಾವೃಷ್ಠಿ ಇರುವ ಇಂತಹ ಸ್ಥಿತಿಯಲ್ಲಿ ಗಟ್ಟಿ ಸಮಾಜ ಮಾತ್ರವಲ್ಲದೆ ಸರ್ವರಿಗೂ ದೇವರು ಒಳಿತನ್ನು ಅನುಗ್ರಹಿಸಲಿ ಅನ್ನುವ ಪ್ರಾರ್ಥನೆಯೊಂದಿಗೆ ಎಲ್ಲರೂ ಪಾಲ್ಗೊಂಡಿದ್ದೇವೆ ಎಂದರು.
ಸೋಮೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಸೀಯಾಳಾಭಿಷೇಕ ನಡೆಸಿಕೊಟ್ಟರು.
ಈ ಸಂದರ್ಭ ಗಟ್ಟಿ ಸಮಾಜದ ನಾಯ್ಗರಾದ ಹರೀಶ್ಚಂದ್ರ ಗಟ್ಟಿ ಬೊಂಬಾಯಿ ಮನೆ, ಸೋಮನಾಥ ಸೇವಾ ಸಮಿತಿ ಅಧ್ಯಕ್ಷ ಯಾದವ ಗಟ್ಟಿ ಮಡ್ಯಾರ್‌ ಹಾಗೂ ಗಟ್ಟಿ ಸಮಾಜದ ಒಂಭತ್ತು ಮಾಗಣೆ ಹಾಗೂ ಸೀಮೆ ಗುರಿಕಾರರು ಹಾಗೂ ಗಟ್ಟಿ ಸಮಾಜ ಯುವಜನ ವಿಭಾಗ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಹಾಗೂ ಗಟ್ಟಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Exit mobile version