Site icon Ullalavani

ರಾ.ಹೆ ಬದಿಯಲ್ಲೇ ತ್ಯಾಜ್ಯ ಎಸೆದ ಟ್ರಾಫಿಕ್ ಪೇದೆ
ಪ್ರಶ್ನಿಸಿದ ಪೌರಕಾರ್ಮಿಕರನ್ನೇ ದಬಾಯಿಸಿದ ಪೊಲೀಸ್ !

UN NEWS NETWORKS

ಉಳ್ಳಾಲ: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂಚಾರಿ ಠಾಣೆಯ ಪೇದೆಯೊಬ್ಬರು ತ್ಯಾಜ್ಯದ ರಾಶಿಯಿದ್ದ ಪ್ಲಾಸ್ಟಿಕ್ ಅನ್ನು ರಾಷ್ಟ್ರೀಯ ಹೆದ್ದಾರಿ 77ರ ಕೆ.ಸಿ ರೋಡ್ ಸಮೀಪ ಎಸೆದಿದ್ದು, ಇದನ್ನು ಪ್ರಶ್ನಿಸಿದ ಪೌರಕಾರ್ಮಿಕರಿಗೆ ಪೇದೆ ದಬಾಯಿಸಿ ನಿಂದಿಸಿರುವ ಘಟನೆ ನಡೆದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತ್ಯಾಜ್ಯ ಎಸೆದ ಸಂಚಾರಿ ಪೊಲೀಸ್‌ ಇದ್ದ ಸ್ಕೂಟರ್
ತಲಪಾಡಿ ಕೆ.ಸಿ ರೋಡು ಸಮೀಪ ತ್ಯಾಜ್ಯ ಎಸೆದು ನಂತರ ಪೌರಕಾರ್ಮಿಕರನ್ನೇ ದಬಾಯಿಸುತ್ತಿರುವ ಪೇದೆ

ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎ 19 ಹೆಚ್ ಎಫ್ 3432 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಟ್ರಾಫಿಕ್ ಪೊಲೀಸ್ ತ್ಯಾಜ್ಯದ ರಾಶಿ ಎಸೆದಿದ್ದಾರೆ. ಇದನ್ನು ಹೆದ್ದಾರಿ ಬದಿಯಲ್ಲಿ ಪೊದೆಗಳನ್ನು ಕಡಿಯುತ್ತಿದ್ದ ಸೋಮೆಶ್ವರ ಪುರಸಭೆಯ ಪೌರಕಾರ್ಮಿಕರು ಗಮನಿಸಿ ವೀಡಿಯೋ ಮೂಲಕ ಸೆರೆಹಿಡಯಲು ಪ್ರಯತ್ನಿಸಿದ್ದರು. ಆದರೆ ತಕ್ಷಣ ಸ್ಕೂಟರನ್ನು ನಿಲ್ಲಿಸಿದ ಪೇದೆ, ಪೌರಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮೊಬೈಲನ್ನು ಕಿತ್ತು ವೀಡಿಯೋ ತೆಗೆಯದಂತೆ ದಬಾಯಿಸಿದರು. ಆದರೂ ಕಾರ್ಮಿಕರೊಬ್ಬರು ಹಿಡನ್ ಆಗಿ ವೀಡಿಯೋ ದೃಶ್ಯೀಕರಿಸಿದ್ದಾರೆ. ಯುನಿಫಾರಂ ಧರಿಸಿದ್ದ ಪೊಲೀಸ್ ಅದರ ಮೇಲೆ ರೈನ್ ಕೋಟ್ ಧರಿಸಿದ್ದರಲ್ಲದೆ, ಮುಖಕ್ಕೆ ಮಾಸ್ಕನ್ನು ಧರಿಸಿದ್ದಾರೆ. `ಬಿಸಾಡಿದ ಕಸ ಹೆಕ್ಕಲು ನಿಮಗೆ ಸಂಬಳ ಕೊಡುವುದಲ್ಲ,, ಮತ್ಯಾಕೆ ನೀವು ಇರುವುದು ‘ ಎಂದು ಗದರಿಸಿರುವುದು ಮತ್ತು ಮನೆಗೆ ವಾಹನ ಬರುತ್ತಿಲ್ಲ ಅದಕ್ಕೆ ಎಸೆದಿದ್ದೇನೆ ಎಂದೆಲ್ಲಾ ಆರೋಪವನ್ನು ಮಾಡುತ್ತಾ ತೆರಳಿದ್ದಾರೆ. ಈ ಬಗ್ಗೆ ಸ್ಕೂಟರಿನ ಚಿತ್ರವನ್ನು ಸೆರೆಹಿಡಿದ ಕಾರ್ಮಿಕರು ಪುರಸಭೆಯ ಅಧಿಕಾರಿಗಳಿಗೆ ನೀಡಿ ಕ್ರಮಕ್ಕೆ ಮನವಿ ಮಾಡಿಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ ದಂಡ ವಿಧಿಸುವ ಸಂಚಾರಿ ಪೊಲೀಸ್ , ಇಡೀ ಸರಕಾರವೇ ಹೆಚ್ಚು ಅನುದಾನವನ್ನು ವಿನಿಯೋಗಿಸಿ ನಡೆಸುತ್ತಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಸರಕಾರಿ ಉದ್ಯೋಗಿಯೇ ಇಂತಹ ಅಪರಾಧ ಎಸಗಿರುವುದರ ವಿರುದ್ಧ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಒತ್ತಾಯಗಳು ಕೇಳಿಬಂದಿದೆ.

Exit mobile version