UN networks
ಕಾಸರಗೋಡು: ರೈಲ್ವೇ ಹಳಿ ಮೇಲೆ ಕಲ್ಲು, ಕಾಂಕ್ರೀಟ್ ತುಂಡುಗಳನ್ನಿರಿಸಿ ರೈಲು ಹಳಿ ತಪ್ಪಿಸುವ ಮೂಲಕ ನೂರಾರು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುವ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗುತ್ತಿರುವ ವಿದ್ಯಾಮಾನವೊಂದು ಬೆಳಕಿಗೆ ಬಂದಿದೆ.
ಕೇರಳ ರಾಜ್ಯದ ಕಾಸರಗೋಡಿನ ಹಲವೆಡೆ
ಕಳೆದ ಕೆಲ ದಿನಗಳಲ್ಲಿ ಈ ರೀತಿಯ ಕೃತ್ಯ ಎಸಗಿರುವುದು ಪತ್ತೆಯಾಗಿದೆ.ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ಯತ್ನ ನಡೆಸಲಾಗಿದೆ.
ಈ ಸಂಬಂಧ ಅ.21ರ ರವಿವಾರ ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆ ರೈಲು ಹಳಿಯಲ್ಲಿ ಕಬ್ಬಿಣದ ಸರಳುಗಳು ಪತ್ತೆಯಾಗಿದ್ದು ರೈಲ್ವೇ ಗಾರ್ಡ್ ಸಮಯಪ್ರಜ್ಞೆಯಿಂದ ಸಂಭಾವ್ಯ ರೈಲು ದುರಂತ ತಪ್ಪಿದ್ದಂತಾಗಿದೆ.
35 ಕಿಲೋ ತೂಕದ ಕಾಂಕ್ರೀಟ್ ತುಂಡನ್ನು ಹಳಿ ಮೇಲೆ ಇರಿಸಿ ದುಷ್ಕೃತ್ಯಕ್ಕೆ ಪ್ಲಾನ್ ಮಾಡಲಾಗಿದ್ದು ಕುಂಬಳೆ ರೈಲು ನಿಲ್ದಾಣದ 400 ಮೀಟರ್ ದೂರದಲ್ಲೂ ಹಳಿಗಳ ಮೇಲೂ ಕಲ್ಲುಗಳು ಪತ್ತೆಯಾಗಿದೆ.ಮಂಗಳೂರು-ಚೆನ್ನೈ ಸೂಪರ್‌ಫಾಸ್ಟ್ ರೈಲು ಸಂಚರಿಸುವ ಮಾರ್ಗದಲ್ಲಿ ಕಲ್ಲುಗಳು ಪತ್ತೆಯಾಗಿದೆ.
ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್), ರೈಲ್ವೇ ಪೊಲೀಸರು ಮತ್ತು ಸ್ಥಳೀಯ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಕೇರಳದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದು ಕಳೆದ ಶನಿವಾರ ಚಿತ್ತಾರಿ ಎಂಬಲ್ಲಿ ಕೊಯಮತ್ತೂರು-ಮಂಗಳೂರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕರ್ನಾಟಕ ಗಡಿ ಭಾಗದ ಕಾಸರಗೋಡಿನ ರೈಲ್ವೇ ಹಳಿಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿದ್ದು ಉತ್ತರ ವಲಯ ರೈಲ್ವೇ ಪೊಲೀಸ್ ಡಿವೈಎಸ್ಪಿ ಕೆ.ಎನ್.ರಾಧಾಕೃಷ್ಣನ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ
