Site icon Ullalavani

ತುಳುವರೆಂದರೆ ಹಿಂದೂಗಳು ಮಾತ್ರವಲ್ಲ, ಬ್ಯಾರಿ, ಪೊರ್ಬು ಪರಿಕಲ್ಪನೆ ಕೂಡ ತುಳುವಿನದ್ದೇ: ಕತ್ತಲ್ ಸಾರ್

UN networks

ಪುತ್ತೂರು: ತುಳುವರೆಂದರೆ ಕೇವಲ ಇಲ್ಲಿನ ಹಿಂದೂಗಳು ಮಾತ್ರವಲ್ಲ. ಬ್ಯಾರಿ, ಪೊರ್ಬು ಪರಿಕಲ್ಪನೆ ಕೂಡ ತುಳುವಿನದ್ದೇ. ಇವರು ಕೂಡ ತುಳುವರೇ ಆಗಿದ್ದಾರೆ. ಈ ಬಂಧುತ್ವ ಬೆಸೆಯಲು ತುಳು ಉತ್ತಮ ಮಾಧ್ಯಮ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ್ ಜಿ. ಕತ್ತಲ್‌ಸಾರ್ ಹೇಳಿದರು.

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ  “ಫಿಲೋ ಬೊಳ್ಳಿ’ ತುಳು ಸಂಘ ಮತ್ತು ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜೈ ತುಲುನಾಡ್(ರಿ.) ಇವರ ಸಹಯೋಗದಲ್ಲಿ “ಬಲೇ ತುಳು ಲಿಪಿ ಕಲ್ಪುಗ’ ಸರಣಿ ಕಾರ್ಯಕ್ರಮ “ತುಳು ತುಲಿಪು’ವನ್ನು ಗುರುವಾರ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ತುಳು ಅಕಾಡೆಮಿ ತನ್ನ 27 ವರ್ಷಗಳ ಹಾದಿಯಲ್ಲಿ ತುಳುವಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ವಿದ್ವಾಂಸ ವೆಂಕಟರಾಜ ಪುಣಿಂಚಿತ್ತಾಯ ಅವರು 1100 ವರ್ಷಗಳ ಹಿಂದಿನ ತುಳು ಲಿಪಿ ಸಾಹಿತ್ಯಗಳನ್ನು ಪತ್ತೆ ಹಚ್ಚಿ ಸಂಶೋಧನೆ ಮಾಡಿದ ಬಳಿಕ ತುಳು ಲಿಪಿ ಪ್ರಚಾರ, ಕಲಿಕೆ, ಜಾಗೃತಿಗಾಗಿ ಅಪಾರ ಕೆಲಸಗಳನ್ನು ಮಾಡಲಾಗಿದೆ. ೨೫೦೦ ವರ್ಷಗಳ ಇತಿಹಾಸ ಹೊಂದಿರುವ ತುಳುವಿನ ಭವ್ಯ ಪರಂಪರೆಯನ್ನು ತುಳುವರು ಮರೆತಿದ್ದು, ಅವರನ್ನು ಬಡಿದೆಬ್ಬಿಸುವ ಕೆಲಸ ಸಾಗುತ್ತಿದೆ. ತುಳು ಭಾಷೆಯನ್ನು ತಾಂತ್ರಿಕವಾಗಿ ವಿಶ್ವಮಾನ್ಯಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಯೂನಿಕೋಡ್‌ಗೆ ಅಳವಡಿಸುವ ಕೆಲಸ ನಡೆಯುತ್ತಿದೆ. ಇದು ಶೀಘ್ರದಲ್ಲೇ ಈಡೇರಲಿದೆ ಎಂದರು.
ವಿದ್ಯಾರ್ಥಿಗಳು ತುಳು ಸಂಧಿ ಪಾಡ್ದನಗಳನ್ನು ಅಧ್ಯಯನ ಮಾಡಿದರೆ ತುಳುವಿನ ಶ್ರೀಮಂತಿಕೆ ತಿಳಿಯಲು ಸಾಧ್ಯವಿದೆ. ತುಳು ಕೇವಲ ಭಾಷೆಯಲ್ಲ. ಅದೊಂದು ಜೀವನ, ಅದೊಂದು ಸಂಸ್ಕೃತಿಯಾಗಿದೆ. ಅದು ನಮ್ಮ ಉಸಿರು. ನಾವು ಇದನ್ನು ಬದಿಗೆ ಸರಿಸಿದ ಕಾರಣ ತುಳುವಿನ ಸತ್ವ ಮರೆಯಾಗಿದೆ. ಮತ್ತೆ ಬೆಳಕಿಗೆ ತರುವ ಕೆಲಸ ಆಗಬೇಕಿದೆ ಎಂದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಮಾತನಾಡಿ, ತುಳುನಾಡಿಗೆ ಪ್ರತ್ಯೇಕ ಅಸ್ತಿತ್ವ ಹಿಂದೆ ಇತ್ತು. ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನ ತುಳು ಸಂಸ್ಥಾನದ ಕುರಿತಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ತುಳುವ ಮನೆತನವಿತ್ತು. ತುಳುಲಿಪಿಯಲ್ಲಿ ಬರೆದ ಸಾವಿರಕ್ಕೂ ಅಧಿಕ ತಾಳೆಗರಿ ಗ್ರಂಥಗಳಿವೆ. ೫೬ ತುಳು ಲಿಪಿ ಶಾಸನಗಳು ಸಿಕ್ಕಿವೆ. ಜಗತ್ತಿಗೆ “ಸೊನ್ನೆ’ ಅಕ್ಷರವನ್ನು ಕೊಟ್ಟಿದ್ದು ಭಾರತ. ಆದರೆ ತುಳು ಲಿಪಿಯಲ್ಲಿ ಸೊನ್ನೆಯಿಲ್ಲ. ಅದರರ್ಥ ಸೊನ್ನೆಯನ್ನು ಭಾರತೀಯರು ಸೃಜಿಸುವ ಮುನ್ನವೇ ತುಳು ಲಿಪಿ ಇತ್ತು ಎಂದರು. ಮಂಗಳೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಎಸ್.ಆರ್. ಹರೀಶ್ ಆಚಾರ್ಯ ಮಾತನಾಡಿ, ತುಳು ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಿನ್ಸಿಪಾಲ್ ರೆ.ಡಾ. ಆಂಟನಿ ಪ್ರಕಾಶ್ ಮೊಂತೆರೋ, ತುಳುವಿನ ಮತಧರ್ಮಗಳ ಬೇಲಿ ಇಲ್ಲ. ಎಲ್ಲ ಧರ್ಮದವರೂ ಇಲ್ಲಿ ತುಳು ಮಾತನಾಡುವ ಕಾರಣ, ತುಳು ನಮ್ಮನ್ನು ಬೆಸೆಯುತ್ತದೆ. ನಾಡು- ನುಡಿಯ ಬಗ್ಗೆ ಗೌರವ, ಪ್ರೀತಿ ಇಲ್ಲದವ ಸುಸಂಸ್ಕೃತನಾಗಲು ಸಾಧ್ಯವೇ ಇಲ್ಲ ಎಂದರು.
ವಿದ್ಯಾರ್ಥಿನಿ ಹಿತಾಶ್ರೀ ತುಳು ಆಶಯ ಗೀತೆ ಹಾಡಿದರು. ಫಿಲೋ ಬೊಳ್ಳಿ ತುಳು ಸಂಘದ ದೀಪಿಕಾ ಸನಿಲ್ ಸ್ವಾಗತಿಸಿದರು. ಪ್ರಶಾಂತ್ ರೈ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಮಾನವಿಕ ಸಂಘದ ಪ್ರೊ. ಸುಬೈರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜೈ ತುಳುನಾಡ್ ಸಂಸ್ಥೆಯ ಜಗದೀಶ್ ಗೌಡ ಕಲ್ಕಳ ಮತ್ತು ನಿಶ್ಚಿತ್ ರಾಮಕುಂಜ ತುಳು ಲಿಪಿ ಕಾರ್ಯಾಗಾರ ನಡೆಸಿಕೊಟ್ಟರು.

Exit mobile version