Site icon Ullalavani

ಮೊಗವೀರಪಟ್ನದಲ್ಲಿ ಬೃಹತ್ ತಿಮಿಂಗಿಲ ಪತ್ತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮೊಗವೀರಪಟ್ನ: ಬೃಹತ್ ಗಾತ್ರದ ಸತ್ತು ಬಿದ್ದ ತಿಮಿಂಗಿಲ ಮೊಗವೀರಪಟ್ನ ಸಮುದ್ರ ತೀರದಲ್ಲಿ ಶುಕ್ರವಾರ ಮುಂಜಾನೆ ವೇಳೆ ಪತ್ತೆಯಾಗಿದೆ.

15 ಅಡಿ ಉದ್ದವಿರುವ ತಿಮಿಂಗಿಲ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ನಸುಕಿನ ಜಾವ ನಾಯಿ ಬೊಗಳುವುದನ್ನು ಕಂಡು ಸ್ಥಳದಲ್ಲೇ ಇರುವ ಜೀವರಕ್ಷಕ ಈಜುಗಾರರ ಸಂಘದ ಪ್ರವೀಣ್ ಕೋಟ್ಯಾನ್ ಅವರು ಗಮನಿಸಿದಾಗ ಸಮುದ್ರದ ದಡದಲ್ಲಿ ತಿಮಿಂಗಲ ಪತ್ತೆಯಾಗಿದೆ.

ಈ ಬಗ್ಗೆ ಉಳ್ಳಾಲ ನಗರಸಭೆ, ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಉಳ್ಳಾಲ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದರು. ಅಲ್ಲದೆ ಸಾರ್ವಜನಿಕರು ತಿಮಿಂಗಿಲ ನೋಡಲು ಜಮಾಯಿಸಿದ್ದರಿಂದಾಗಿ ಸ್ಥಳದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣ ಆಯಿತು.

ಉಳ್ಳಾಲ ನಗರಸಭೆ ವತಿಯಿಂದ ಜೆಸಿಬಿ ಮೂಲಕ ಮರಳು ಅಗೆದು ಅಲ್ಲೇ ಹೂತು ಹಾಕಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಇದೇ ಗಾತ್ರದ ತಿಮಿಂಗಿಲವೊಂದು ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಅದನ್ನು ಜೀವರಕ್ಷಕ ಸಂಘದ ಸದಸ್ಯರು ಸೇರಿಕೊಂಡು ದೇವಸ್ಥಾನ ಬಳಿಯಿಂದ ಉಳ್ಳಾಲ ಕಡೆಗೆ ಹಗ್ಗದ ಮೂಲಕ ಎಳೆದು ತಂದು ಉಳ್ಳಾಲದಲ್ಲಿ ಮರಳಿನಡಿ ಹೂತುಹಾಕಿದ್ದರು. ತಿಮಿಂಗಿಲದ ತಲೆಯ ಭಾಗ ಔಷಧಿಗೆ ಉಪಯೋಗ ಆಗುವುದರಿಂದ ಹೆಚ್ಚಿನ ಬೇಡಿಕೆಯಿದೆ. ಆದರೆ ಇಂದು ಸಿಕ್ಕಿರುವ ತಿಮಿಂಗಿಲದ ತಲೆಯ ಭಾಗ ಸಂಪೂರ್ಣ ಕೊಳೆತು ಹೋಗಿದೆ.

ಜೀವರಕ್ಷಕ ಸಂಘದ ಅಧ್ಯಕ್ಷರು
ಪ್ರವೀಣ್ ಕೋಟ್ಯಾನ್

Exit mobile version