UN NEWS NETWORKS
ಉಳ್ಳಾಲ: ಮಂಗಳೂರು ಕ್ಷೇತ್ರದ ಶಾಸಕರು ಬಿಜೆಪಿ ನಡೆಸುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಕಾಲು ಹಾಕುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಹಲವು ರಸ್ತೆಗಳನ್ನು ತಡೆಹಿಡಿದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅನುದಾನದಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೈಗೋಳಿಯಿಂದ ಅರಸರಮೂಲೆಯವರೆಗಿನ ಕಾಂಕ್ರೀಟಿಕರಣ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯಾಧ್ಯಕ್ಷರಿಂದ ಹಿಡಿದು ಪ್ರತಿಯೋರ್ವ ಬಿಜೆಪಿ ಮುಖಂಡರ ಸಹಕಾರದೊಂದಿಗೆ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ರಸ್ತೆಯನ್ನು ಕ್ಷೇತ್ರದ ಶಾಸಕ ತಡೆಹಿಡಿದಾಗ , ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನಪರಿಷತ್ ಸದಸ್ಯರಾಗಿ, ಅವರಿಗೂ ಮಂಗಳೂರು ಕ್ಷೇತ್ರದ ಜವಾಬ್ದಾರಿ ಇರುವುದನ್ನು ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕಾಮಗಾರಿ ನಡೆಸಿದ್ದೇವೆ. ಕೊಣಾಜೆ ಗ್ರಾಮದಲ್ಲಿ ವಿವಿಧ ಬೇಡಿಕೆಗಳಿದ್ದು, ಅಲ್ಲಿಗೂ ಅನುದಾನ ಮಂಜೂರುಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಿಂದೆ ಜಿ.ಪಂ, ತಾ.ಪಂ ಇದ್ದಂತಹ ಅವಧಿಯಲ್ಲಿ ಶಾಸಕರು ಸ್ಪಂಧಿಸದ ಸಂದರ್ಭ ಬೇಸರಗೊಂಡಿದ್ದೆವು. ಆದರೆ ಉಳ್ಳಾಲದಲ್ಲಿಯೂ ಬಿಜೆಪಿ ಶಾಸಕರು ಇರುತ್ತಿದ್ದಲ್ಲಿ ಬೆಳ್ತಂಗಡಿ, ಮೂಡಬಿದ್ರೆ ಸೇರಿದಂತೆ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕೋಟ್ಯಂತರ ಅನುದಾನದ ಕಾಮಗಾರಿಗಳು ಇಲ್ಲಿಯೂ ನಡೆಯುತಿತ್ತು. ಮಂಗಳೂರು ಕ್ಷೇತ್ರದ ಜವಾಬ್ದಾರಿಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ವಹಿಸಿಕೊಂಡ ನಂತರ ಕ್ಷೇತ್ರದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಶಾಸಕನ ಆಯ್ಕೆ ಆಗಬೇಕಿದೆ ಎಂದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ರಸ್ತೆ ಉದ್ಘಾಟಿಸಿದರು. ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ. ಮಾಜಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ , ಕ್ಷೇತ್ರ ಪ್ರ. ಕಾ ಹೇಮಂತ್ ಕುಮಾರ್ ಶೆಟ್ಟಿ, ಮುಖಂಡರುಗಳಾದ ಸಂತೋಷ್ ಶೆಟ್ಟಿ ಅಸೈಗೋಳಿ, ತಿರುಮಲೇಶ್ವರ ಭಟ್, ಕ್ಷೇತ್ರ ಸಮಿತಿ ಪ್ರದಾನ ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ನಿವೃತ್ತ ಮುಖ್ಯೋಪಾಧ್ಯಾಯ ಆನಂದ ಕೆ.ಅಸೈಗೋಳಿ, ಸತೀಶ್ ಕುಮಾರ್, ಕೊಣಾಜೆ ಗ್ರಾ.ಪಂ ಉಪಾಧ್ಯಕ್ಷ ರಾಮಕೃಷ್ಣ ಪಟ್ಟೋರಿ, ರಾಜೇಶ್ ಕಾನ, ನಾರಾಯಣ ರೈ, ಸದಸ್ಯರುಗಳಾದ ವೇದಾವತಿ ಗಟ್ಟಿ, ಪೂರ್ಣಿಮ, ರಾಜೀವಿ, ಶಶಿಕಲಾ, ಸಿದ್ಧಾರ್ಥ್ ಶೆಟ್ಟಿ, ಚಿತ್ರಕಲಾ , ಶಿವಣ್ಣ, ರಿತೇಶ್, ಕರುಣಾಕರ, ಶೇಖರ, ಸನತ್ ಕಕ್ಕೆಮಜಲ್, ರವಿ ಕಕ್ಕೆಮಜಲ್, ಪುರುಷೋತ್ತಮ ಕಲ್ಲಾಪು, ಪ್ರವೀಣ್ ಕೊಂಡಾಣ, ಕರುಣಾಕರ ಕಾನ ಮೊದಲಾದವರು ಉಪಸ್ಥಿತರಿದ್ದರು.