UN networks
ಉಳ್ಳಾಲ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಮೈಸೂರು ವಲಯದ 2022-23ರ ಅಂತರಕಾಲೇಜು ಫುಟ್‍ಬಾಲ್ ಪಂದ್ಯಾಟದಲ್ಲಿ ಕಣಚೂರು ಇನ್‍ಸ್ಟ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಾಟೆಕಲ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ವಿವಿಧ ವಿದ್ಯಾಸಂಸ್ಥೆಗಳಿಂದ ಒಟ್ಟು 48 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಫೈನಲ್ ಪಂದ್ಯಾಟದಲ್ಲಿ ತೇಜಸ್ವಿನಿ ಇನ್‍ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕುಡುಪು ಮಂಗಳೂರು ತಂಡವನ್ನು ಸೋಲಿಸಿ ಫುಟ್‍ಬಾಲ್ ಚಾಂಪಿಯನ್‍ಶಿಪ್ ಪಡದುಕೊಂಡರೆ, ತೇಜಸ್ವಿನಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಪಂದ್ಯಾಟದಲ್ಲಿ ತೇಜಸ್ವಿನಿ ಇನ್‍ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕುಡುಪು ತಂಡದ ಆಟಗಾರ ಗೋವಿಂದ್ ಉತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರೆ, ಕಣಚೂರು ಇನ್‍ಸ್ಟ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಾಟೆಕಲ್ ತಂಡದ ಆಟಗಾರ ಶಮ್ಮಾಸ್ ಉತ್ತಮ ಡಿಫೆಂಡರ್ ಮತ್ತು ಹಾದಿ ರೆಹೆಮಾನ್ ಉತ್ತಮ ಗೋಲ್‍ಕೀಪರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಫಾ| ರೋಶನ್ ಕ್ರಾಸ್ತ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಇ.ಎಸ್.ಜೆ. ಪ್ರಭು ಕಿರಣ್, ದೈಹಿಕ ಶಿಕ್ಷಣ ನಿರ್ದೇಶಕ ಚೆನ್ನಕೇಶವ ಎಂ.ಜಿ., ಸಂಯೋಜಕ ಡಾ| ಹಾಫಿಝ್ ಎಸ್. ಕ್ರೀಡಾ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ವಿವಿಧ ಕಾಲೇಜು ತಂಡಗಳ ಮುಖ್ಯಸ್ಥರು ಸಮಾರೋಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
