UN networks
ಮಂಗಳೂರು: ತನ್ನ ತಂದೆಯ ಆಸೆ ಈಡೇರಿಸಲು ನಾಲ್ಕು ತಿಂಗಳ ಹಿಂದೆ ಅರುಣಾಚಲ ಪ್ರದೇಶಕ್ಕೆ ಬೈಕ್ ಯಾತ್ರೆ ಹೊರಟ ಯುವತಿಯೊಬ್ಬಳು ಇದೀಗ ಇಡೀ ದೇಶ ಸುತ್ತಿ ತಾಯ್ನಾಡಿಗೆ ವಾಪಾಸಾಗಿದ್ದಾಳೆ. ಮೂಲತಃ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿಯಾಗಿರುವ ಅಮೃತಾ ಜೋಷಿ ಬೈಕ್ ಯಾತ್ರೆ ಕೊನೆಯ ಹಂತದಲ್ಲಿ ಇಂದು ಮಂಗಳೂರು ಮೂಲಕವಾಗಿ ಕುಂಬಳೆ ತಲುಪಿ ಯಾತ್ರೆಯನ್ನ ಅಂತ್ಯಗೊಳಿಸಲಿದ್ದಾರೆ. 17ನೇ ವಯಸ್ಸಿಲ್ಲೇ ಬೈಕ್ ರೈಡಿಂಗ್ ಕಲಿತಿರೋ ಈಕೆಗೆ ಸದ್ಯ 22ರ ಹರೆಯ. ಈಕೆಯ ಬೈಕ್ ಕ್ರೇಝ್‌ಗೆ ಸಂಪೂರ್ಣ ಸಹಕಾರ ನೀಡಿದ್ದು ಅಮೃತಾ ಅವರ ತಂದೆ ಅಶೋಕ್ ಜೋಷಿ. ಮಗಳು ಬೈಕ್ ರೈಡಿಂಗ್ ಕಲಿಬೇಕು ಮತ್ತು ಬೈಕ್‌ನಲ್ಲಿ ದೇಶ ಸುತ್ತಬೇಕು ಅನ್ನೋದು ಆಸೆ ಅಶೋಕ್ ಜೋಷಿಯವರದ್ದಾಗಿತ್ತು. ಅದರೆ ಅಮೃತಾ ಪರಿಪೂರ್ಣವಾಗಿ ಬೈಕ್ ರೈಡಿಂಗ್ ಕಲಿಯುವ ವೇಳೆಗೆ ತಂದೆ ಅಶೋಕ್ ಜೋಷಿ ಇಹಲೋಕ ತ್ಯಜಿಸಿದ್ದಾರೆ. ಅದರೂ ಮಗಳು ಅಪ್ಪನ ಆಸೆ ಈಡೇರಿಸಿದ್ದಾರೆ.
ಅರುಣಾಚಲ ಪ್ರದೇಶದವರೆಗೆ ಮಾತ್ರ ಸೀಮಿತವಾಗಿದ್ದ ಬೈಕ್ ಯಾತ್ರೆ ಜನರಿಂದ ಸಿಕ್ಕ ಪ್ರೋತ್ಸಾಹದಿಂದ ಇಡೀ ದೇಶ ಸುತ್ತುವ ಪ್ರೋತ್ಸಾಹ ನೀಡಿತು. ಫೆಬ್ರವರಿ 9ರಂದು ಕೇರಳದ ಕ್ಯಾಲಿಕಟ್ ನಲ್ಲಿ ಆರಂಭಗೊಂಡಿದ್ದ ಇವರ ಬೈಕ್ ಯಾತ್ರೆ ಎಪ್ರಿಲ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಅಂತ್ಯಗೊಂಡಿತ್ತು. ದೇಶದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುವ ಹಿನ್ನೆಲೆಯಲ್ಲಿ ಲದಾಕ್, ಪಂಜಾಬ್ ದೆಹಲಿ ಮುಗಿಸಿ ಉತ್ತರ ಪ್ರದೇಶ ತಲುಪಿದ್ದ ಅಮೃತಾಗೆ ಹೈವೇಯಲ್ಲಿ ಅಪಘಾತವಾಗಿತ್ತು. ಹಿಂದಿನಿಂದ ಬಂದ ಸ್ಕಾರ್ಪಿಯೋ ವಾಹನವೊಂದು ಅಮೃತಾ ಓಡಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಅಮೃತಾಗೂ ಗಂಭೀರ ಸ್ವರೂಪದ ಏಟುಗಳಾಗಿದ್ದ ಕಾರಣ ಮನೆಗೆ ವಾಪಾಸಾಗಿ ಒಂದು ತಿಂಗಳು ಮನೆಯಲ್ಲೇ ಇರುವಂತಾಗಿತ್ತು. ಬಳಿಕ ಎಲ್ಲಿ ಮೊಟಕುಗೊಂಡಿತ್ತೋ ಅಲ್ಲಿಂದಲೇ ಮತ್ತೆ ಯಾತ್ರೆಯನ್ನ ಆರಂಭ ಮಾಡಲಾಗಿದ್ದು, ಸುಮಾರು 23 ಸಾವಿರ ಕಿ.ಮೀ ದೂರವನ್ನ 5 ತಿಂಗಳಿನಲ್ಲಿ ಮುಗಿಸಿದ್ದಾಳೆ.
