Site icon Ullalavani

ನೇತ್ರಾವತಿ ಸೇತುವೆ ಹೊಂಡಕ್ಕೆ ಬಿದ್ದು ಕೈಮೂಳೆ ಮುರಿತ ಪರೀಕ್ಷೆ ಬರೆಯಲಾಗದ ಸ್ಥಿತಿಯಲ್ಲಿ ಎಂ.ಎಸ್ಸಿ ವಿದ್ಯಾರ್ಥಿನಿ

UN NEWS NETWORKS

ಉಳ್ಳಾಲ:  ರಾ.ಹೆ.66ರ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿ ನಿರ್ಮಾಣಗೊಂಡ ಬೃಹತ್‌ ಗಾತ್ರದ ಹೊಂಡಕ್ಕೆ ಬಿದ್ದು ಸ್ಕೂಟರ್‌ ಸವಾರೆ  ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ  ಬಲಗೈ ಮೂಳೆ ಮುರಿತಕ್ಕೊಳಗಾಗಿ, ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಘಟನೆ  ನಡೆದಿದೆ.  ಘಟನೆಯಿಂದ ಮುಂದಿನ ತಿಂಗಳು ನಡೆಯಲಿರುವ ಯುಜಿಸಿ ಪರೀಕ್ಷೆ ಹಾಗೂ ಆಂತರಿಕ ಪರೀಕ್ಷೆ ಬರೆಯಲು ಸಾಧ್ಯವಾಗದೆ ಶಿಕ್ಷಣದಿಂದ ಒಂದು ವರ್ಷವೇ ವಂಚಿತಳಾಗುವ ಆತಂಕಕ್ಕೆ ಒಳಗಾಗಿದ್ದಾರೆ.
ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ಎಂ.ಎಸ್ಸಿ ವಿದ್ಯಾರ್ಥಿನಿ, ಕೊಟ್ಟಾರ ನಿವಾಸಿ ನಿಶ್ಮಿತಾ (19) ಗಾಯಾಳು. ಜು.22 ರಂದು ಸಂಜೆ ಕೊಣಾಜೆ ಕಡೆಯಿಂದ ಮಂಗಳೂರಿಗೆ ತನ್ನ ಸ್ಕೂಟಿ ವಾಹನದಲ್ಲಿ ತೆರಳುವ ಸಂದರ್ಭ ಜೋರಾಗಿ ಮಳೆಯಾಗುತಿತ್ತು.   ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ಪ್ರಯಾಣಿಸುವ ಸಂದರ್ಭ ಸೇತುವೆ ಮಧ್ಯಭಾಗದಲ್ಲಿ ಬೃಹತ್‌ ಗಾತ್ರದ ಹೊಂಡಕ್ಕೆ ಸ್ಕೂಟಿ ಸಿಲುಕಿ ರಸ್ತೆಗೆ ಉರುಳಿದೆ.  ಮಳೆಯಿಂದಾಗಿ ಹೊಂಡದ ಅರಿವು ಅವರಿಗೆ ಬಂದಿರಲಿಲ್ಲ.  ರಸ್ತೆಯಲ್ಲಿ ಗಂಭೀರ ಗಾಯಗೊಂಡು ಬಿದ್ದ ವಿದ್ಯಾರ್ಥಿನಿಯನ್ನು ಕಂಡ ರಿಕ್ಷಾ ಚಾಲಕರೊಬ್ಬರು ತಕ್ಷಣ ಆಕೆಯನ್ನು ನಗರದ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ  ಬಲಗೈ ಮೂಳೆ ಮುರಿತಕ್ಕೊಳಗಾಗಿರುವುದು ಎಕ್ಸ್‌ ರೇ ಮೂಲ ಗೊತ್ತಾಗಿದೆ.  ಅಲ್ಲದೆ ಕೈ ಹಾಗೂ ಮೈ ಪೂರ್ತಿ ಅಲ್ಲಲ್ಲಿ ಗಾಯಗಳೂ ಆಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಲಗೈ ಮೂಳೆ ಜೋಡಿಸಲು ಶಸ್ರ್ತಚಿಕಿತ್ಸೆ ನಡೆಸಿ ರಾಡನ್ನು ಅಳವಡಿಸಲಾಗಿದೆ.  ಮುಂದಿನ ಆರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ʻಅಂದು ಪ್ರಾಜೆಕ್ಟ್‌ ಕೆಲಸಗಳಿದ್ದುದರಿಂದ ಸ್ಕೂಟರನ್ನು ಕಾಲೇಜಿಗೆ ತಂದಿದ್ದೆನು. ಮನೆಗೆ ವಾಪಸ್ಸು ಮರಳುವ ಸಂದರ್ಭ ನೇತ್ರಾವತಿ ಸೇತುವೆಯಲ್ಲಿನ ಹೊಂಡ ಅರಿವಿಗೆ ಬಾರದೆ ಬಿದ್ದು   ಕೈ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದೇನೆ. ಎಂ.ಎಸ್ಸಿ ಅಂತಿಮ ವರ್ಷವಾಗಿರುವುದರಿಂದ ಆಗಸ್ತ್‌ ತಿಂಗಳಿನಲ್ಲಿ ಆಂತರಿಕ ಪರೀಕ್ಷೆಗಳಿವೆ. ಅದನ್ನು ಎದುರಿಸಲು ಸಾಧ್ಯವಿಲ್ಲ. ಜೊತೆಗೆ ಆ.12 ರಂದು ಯುಜಿಸಿ ಪರೀಕ್ಷೆಯೂ ಇರುವುದರಿಂದ  ಭವಿಷ್ಯವೇ ಅತಂತ್ರವಾಗಿದೆ. ಶಸ್ತ್ರಚಿಕಿತ್ಸೆಗೆ ಈವರೆಗೆ ರೂ.65,000 ಖರ್ಚನ್ನು ಹೆತ್ತವರು ಭರಿಸಿದ್ದಾರೆ.  ಆಸ್ಪತ್ರೆ ಬಿಲ್‌ ಇನ್ನು ಬರಬೇಕಿದೆ. ಹೆದ್ದಾರಿ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ. ಪ್ರಕರಣ ಯಾರ ಮೇಲೆ ದಾಖಲಿಸುವುದೇ ಗೊಂದಲದಲ್ಲಿರುವುದರಿಂದ ಅದನ್ನು ಕೈಬಿಟ್ಟಿದ್ದೇವೆ
ನಿಶ್ಮಿತಾ
ಗಾಯಾಳು ವಿದ್ಯಾರ್ಥಿನಿ 

Exit mobile version