UN NEWSNETWORKS
ಉಳ್ಳಾಲ: ಟೆಂಪೋವೊಂದರಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಕಬ್ಬಿಣ ಸಾಗಾಟ ನಡೆಸುತ್ತಿದ್ದ ಟೆಂಪೋವೊಂದು ಓವರ್ ಲೋಡ್ ಆಗಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಕೆಳಗೆ ಇಳಿಯುವ ಧಾವಂತದಲ್ಲಿ ಪಲ್ಟಿ ಹೊಡೆದಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಕಬ್ಬಿಣದಡಿ ಸಿಲುಕಿ ಇಬ್ಬರು ತಮಿಳು ಮೂಲದ ಮಹಿಳೆಯರು ಗಂಭೀರ ಗಾಯಗೊಂಡಿದ್ದು, ಓರ್ವ ಸ್ಥಳೀಯ ಸೇರಿದಂತೆ ಇನ್ನೋರ್ವ ತಮಿಳು ಮೂಲದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಟೆಕಾರು ಕಡೆಯಿಂದ ತೊಕ್ಕೊಟ್ಟು ಒಳಪೇಟೆಗೆ ಬರುತ್ತಿದ್ದ ಟೆಂಪೋ , ಕಬ್ಬಿಣದ ಓವರ್ ಲೋಡ್ ಇದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಈ ವೇಳೆ ಹಿಂಬದಿಯಲ್ಲಿದ್ದ ಇಬ್ಬರು ತಮಿಳು ಮೂಲದ ಮಹಿಳೆಯರು ಕಬ್ಬಿಣದಡಿ ಸಿಲುಕಿ ಒದ್ದಾಡಿದ್ದಾರೆ. ತಕ್ಷಣ ಚಾಲಕ ಹಾಗೂ ಇನ್ನೋರ್ವ ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದಾನೆ. ಸ್ಥಳೀಯರು ಸೇರಿ ಇಬ್ಬರು ಮಹಿಳೆಯರನ್ನು ಕಬ್ಬಿಣದ ರಾಶಿಯಿಂದ ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಟೆಂಪೋ ಚಾಲಕನ ಮೇಲೆ ಸಂಶಯ ವ್ಯಕ್ತಪಡಿಸಿದ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ವಿಚಾರಿಸಿದಾಗ ಕೋಟೆಕಾರು ಸಮೀಪ ನಡೆಯುತ್ತಿರುವ ರೈಲ್ವೇ ಕಾಮಗಾರಿ ಪ್ರದೇಶದಿಂದ ಕಬ್ಬಿಣವನ್ನು ಕದ್ದು ಉಳ್ಳಾಲ ಕಡೆಗೆ ಒಳರಸ್ತೆಯ ಮೂಲಕ ಟೆಂಪೋ ಚಲಿಸುತಿತ್ತು ಎನ್ನಲಾಗಿದೆ. ಉಳ್ಳಾಲ ಪೊಲೀಸರು ಟೆಂಪೋ ಚಾಲಕನನ್ನು ಹಾಗೂ ತಮಿಳು ನಿವಾಸಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪೈಕಿ ಓರ್ವನ ಮೇಲೆ ಈ ಹಿಂದೆಯೂ ಕಳವು ಪ್ರಕರಣವಿತ್ತು ಅನ್ನುವುದು ತಿಳಿದುಬಂದಿದೆ.