ಉಳ್ಳಾಲ: ಅನಾಥರ ಸೇವೆಯ ಜೊತೆಗೆ ಹಿರಿಯರ ಆಶೀರ್ವಾದ ಪಡೆದುಕೊಂಡು , ಆಂಬ್ಯುಲೆನ್ಸ್ ಮೂಲಕ ಅಶಕ್ತರ ಪಾಲಿಗೆ ಆಶಾಕಿರಣವಾಗಿ ಆಸ್ಪತ್ರೆಗೆ ದಾಖಲಿಸುವ ಕಾಯಕ ಸಮಾಜಕ್ಕೆ ಮಾದರಿ ಎಂದು ಹಿರಿಯ ವಕೀಲ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಗೌರವಾಧ್ಯಕ್ಷ ಮೋಹನ್ ದಾಸ್ ರೈ ಅಭಿಪ್ರಾಯಪಟ್ಟರು.
ಅವರು ಕರವೇ ಗಜಸೇನೆ ಸೇವಾ ಟ್ರಸ್ಟ್ ದ.ಕ ಜಿಲ್ಲೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಳ್ಮ ಪೆಲತ್ತಡಿಯ ಸೇವಾಭಾವ ಚಾರಿಟೇಬಲ್ ಟ್ರಸ್ಟ್ ಇವರ ಅನಾಥ ಮಹಿಳೆಯರ ಸೇವಾಶ್ರಮದಲ್ಲಿ ಅನ್ನದಾನ ನೆರವೇರಿಸಿ ಮಾತನಾಡಿದರು.
ಕರವೇ ಗಜಸೇನೆಯಲ್ಲಿ ಆಂಬ್ಯುಲೆನ್ಸ್ ಚಾಲಕರು ಹಾಗೂ ಸಾಮಾನ್ಯರು ಕಾರ್ಯಕರ್ತರಾಗಿದ್ದುಕೊಂಡು ಮನೋರಂಜನೆಯತ್ತ ಹೆಚ್ಚು ಆಕರ್ಷಿತರಾಗದೇ ಸಮಾಜಸೇವೆಗೆ ಹೆಚ್ಚಿನ ಒಲವು ತೋರಿಸುವುದು ಯುವಸಮುದಾಯಕ್ಕೆ ಮಾದರಿ. ಆಶ್ರಮಗಳು ಕಡಿಮೆಯಾಗುವ ಉದ್ದೇಶವನ್ನು ಗಜಸೇನೆಯೂ ಹೊಂದಿದೆ. ಆದರೆ ಅಶಕ್ತರಿಗೆ ಸಹಕಾರವಾಗುವ ಕಾರ್ಯವಾಗಬೇಕಿದೆ.
ಸೇವಾಭಾವ ಚಾರಿಟೇಬಲ್ ಟ್ರಸ್ಟ್ ನ ಜಿ.ಆರ್ ಶೆಟ್ಟಿ ಮಾತನಾಡಿ , ಕಳೆದ ೯ ವರ್ಷಗಳಲ್ಲಿ ಆಶ್ರಮ ಹಲವು ನಿರ್ವಸತಿ ಮಹಿಳೆಯರಿಗೆ ಆಶ್ರಯವನ್ನು ಕಲ್ಪಿಸಿದೆ. ಆಶ್ರಮದ ಇಬ್ಬರನ್ನು ಸುರಕ್ಷಿತವಾಗಿ ಅವರ ಕುಟುಂಬಕ್ಕೆ ಸೇರಿಸಿರುವ ಖುಷಿ ಇದೆ. ದಾನಿಗಳ ಸಹಕಾರದಿಂದ ಅನಾಥವಾಗಿರುವ ಮಹಿಳೆಯರ ಸೇವಾ ಕಾರ್ಯ ನಡೆಸಲು ಸಾಧ್ಯವಾಗಿದೆ ಎಂದರು.
ಉಪಾಧ್ಯಕ್ಷ ದೀಕ್ಷಿತ್ ಸುಳ್ಯ ಮಾತನಾಡಿ, ಜಿಲ್ಲೆಯಲ್ಲಿ ಗಜಸೇನೆ ಉತ್ತಮ ಕಾರ್ಯದೊಂದಿಗೆ ಸಮಾಜಸೇವೆಯಲ್ಲಿ ಭಾಗವಹಿಸಿದೆ. ಪ್ರಚಾರದ ಷೋಕಿಗಾಗಿ ಮಾಡದೇ, ರಾಜ್ಯಾಧ್ಯಕ್ಷರ ಮನವಿಯಂತೆ ಕನ್ನಡ ರಾಜ್ಯೋತ್ಸವವನ್ನು ಅಶಕ್ತರಿಗೆ ಸಹಕರಿಸುವ ಮೂಲಕ ಆಚರಿಸಲಾಗಿದೆ. ಕನ್ನಡಕ್ಕಾಗಿ ಎಲ್ಲಾ ಧರ್ಮದವರು ಒಟ್ಟಾಗಿ ಸೇರಿಕೊಂಡು ಕನ್ನಡದ ಜನತೆಗೆ ಸಹಕರಿಸುತ್ತಿದ್ದೇವೆ. ಇನ್ನಷ್ಟು ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಕ್ರಿಯಾಯೋಜನೆಯನ್ನು ರಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ, ಸಹ ಕಾರ್ಯದರ್ಶಿ ಅರುಣ್ ಡಿಸೋಜ ಅಸೈಗೋಳಿ, ಉಪಾಧ್ಯಕ್ಷ ದೀಕ್ಷಿತ್ ಸುಳ್ಯ, ಕೋಶಾಧಿಕಾರಿ ಲೋಕೇಶ್ ಪುತ್ತೂರು , ಸದಸ್ಯರುಗಳಾದ ನೌಷಾದ್ ಕೊಣಾಜೆ, ವಿಶ್ವಾಸ್ ಕೆ., ಆಶ್ರಮದ ಮೇಲ್ವಿಚಾರಕ ಬಾಲಕೃಷ್ಣ, ಗ್ಲೆನ್ ಅಶ್ವಲ್ ಡಿಸೋಜ, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.
ನೌಷಾದ್ ಕೊಣಾಜೆ ನಿರೂಪಿಸಿದರು. ದೀಕ್ಷಿತ್ ಸುಳ್ಯ ವಂದಿಸಿದರು.