UN networks
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದಿದ್ದ ಸರಕಾರಿ ಕಾರ್ಯಕ್ರಮವಾದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯೇ ತನ್ನ ಮಗುವನ್ನು ಕುರ್ಚಿ ನೀಡಿ ವೇದಿಕೆಯಲ್ಲಿ ಕುಳ್ಳಿರಿಸಿ ಸಭೆಗೆ ಅಗೌರವ ತೋರಿರುವ ಫೋಟೋವೊಂದು ವೈರಲ್ ಆಗಿದೆ.
ಕೋಟೆಕಾರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಪ್ರಭಾಕರ್ ಎಂ.ಪಿ ಇವರು ಪಟ್ಟಣ ಪಂಚಾಯಿತಿ ಕಚೇರಿಯೊಳಗೆ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಅಗೌರವ ಪ್ರದರ್ಶಿಸಿದ್ದಾರೆ. ಸರಕಾರಿ ಕಾರ್ಯಕ್ರಮದಲ್ಲಿ ಅದರದ್ದೇ ಆದ ಶಿಸ್ತು ಇರುತ್ತದೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ತನ್ನ ಪುತ್ರನಿಗೇ ಕುರ್ಚಿ ನೀಡಿರುವ ಫೋಟೊ ವೈರಲ್ ಆಗಿದೆ. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ವೇದಿಕೆಯ ಕೆಳಗಿದ್ದರೂ, ವೇದಿಕೆ ಮೇಲೆ ಬಾಲಕನನ್ನು ಕುರ್ಚಿಯಲ್ಲಿ ಕುಳ್ಳಿರಿಸಿರುವುದು ಹಲವರ ಅಸಮಧಾನಕ್ಕೆ ಕಾರಣವಾಗಿದೆ.
ಮನೆಯಲ್ಲಿ ಯಾರೂ ಇರದ ಕಾರಣಕ್ಕೆ ಮಕ್ಕಳನ್ನು ಪಟ್ಟಣ ಪಂಚಾಯಿತಿ ಬಳಿ ಕರೆದುಕೊಂಡು ಬಂದಿದ್ದೆನು. ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಆಚೆ ಈಚೆ ಹೋಗುತ್ತಿದ್ದ ಪುತ್ರನನ್ನು ಕುರ್ಚಿ ನೀಡಿ ಕುಳ್ಳಿರಿಸಿರುವುದು ನಿಜ. ಯಾವುದೇ ದುರುದ್ದೇಶ ಇಟ್ಟುಕೊಂಡು ಮಾಡಿಲ್ಲ. ಸಣ್ಣ ಬಾಲಕನಾಗಿರುವುದರಿಂದ ಪಕ್ಕದಲ್ಲಿ ಕೂರಿಸಿದ್ದೇನೆ
ಪ್ರಭಾಕರ್ ಎಂ.ಪಿ
ಮುಖ್ಯಾಧಿಕಾರಿ
ಸರಕಾರಿ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಕುಳಿತುಕೊಳ್ಳಲು ಅದರದ್ದೇ ಆದ ಪ್ರೊಟೊಕಾಲ್ ಇದೆ. ಜಿಲ್ಲೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಹೆಚ್ಚಿನ ಪಾಲನೆ ಮಾಡಲಾಗುತ್ತದೆ. ಪಂಚಾಯಿತಿ ಒಳಗಿನ ಕಾರ್ಯಕ್ರಮಗಳಲ್ಲಿ ಪಾಲನೆಯಾಗುತ್ತಿಲ್ಲ. ಆದರೂ ಮಕ್ಕಳನ್ನು ವೇದಿಕೆಗಳಲ್ಲಿ ಇರಿಸುವುದು ತಪ್ಪು. ಈ ಕುರಿತು ದೂರುಗಳು ಬಂದಲ್ಲಿ ಶಿಸ್ತು ಕ್ರಮವನ್ನು ಪಡೆದುಕೊಳ್ಳಲಾಗುವುದು.
ದಾದಾ ಸಾಹೇಬ್
ಪ್ರೊಟಕಾಲ್ ಅಧಿಕಾರಿ
