Site icon Ullalavani

ಲವ್ ಸೆಕ್ಸ್ ಔರ್ ದೋಖಾ ಪ್ರಕರಣ ಮೈಸೂರಿನಲ್ಲಿ ಪಾಲುದಾರಿಕೆಯಲ್ಲಿತ್ತು ಹೊಟೇಲ್ ಉದ್ಯಮ

UN networks

ಕೊಣಾಜೆ: ಲವ್ ಸೆಕ್ಸ್ ದೋಖಾ ಹಾಗೂ ಲಕ್ಷಾಂತರ ಹಣ ಪಡೆದ ಮುಡಿಪು ನಿವಾಸಿ ಯುವಕನ ಮನೆಗೆ ಬಂದಿದ್ದ ಯುವತಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಮೈಸೂರಿನಲ್ಲಿರುವುದರಿಂದ ಅಲ್ಲೇ ಪ್ರಕರಣ ದಾಖಲಿಸುವಂತೆಯೂ, ಅಲ್ಲದೆ ಯುವತಿಯೇ ಮೈಸೂರಿಗೆ ತೆರಳುವುದಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣಕ್ಕೆ ತಲುಪಿಸಿ, ಬಸ್ ಟಿಕೇಟ್ ದರವನ್ನು ಪೊಲೀಸರೇ ನೀಡಿ ಬಸ್ಸು ನಿರ್ವಾಹಕರಲ್ಲಿ ಯುವತಿಯನ್ನು ಸುರಕ್ಷಿತವಾಗಿ ಮೈಸೂರು ತಲುಪಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ಕೊಣಾಜೆ ಠಾಣಾ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.


ವಿಧಾನ ಪರಿಷತ್ ಕಲಾಪದಲ್ಲಿ ಕೊಣಾಜೆ ಠಾಣಾ ಪೆÇಲೀಸರ ಮೇಲೆ ತೇಜಸ್ವಿನಿ ಗೌಡ ಸಂತ್ರಸ್ತ ಮಹಿಳೆಯಿಂದ ಕೊಣಾಜೆ ಠಾಣಾ ಪೊಲೀಸರು ದೂರು ಸ್ವೀಕರಿಸಿಲ್ಲ ಅನ್ನುವ ಆರೋಪ ಮಾಡಿದ್ದರು. ಆದರೆ ಸೆ.21 ರಂದು ಮುಡಿಪು ಸಾಂಬಾರುತೋಟ ನಿವಾಸಿ ಮಹಮ್ಮದ್ ಅಜ್ವಿನ್ ಮನೆಗೆ ಬಂದಿದ್ದ ಯುವತಿಯನ್ನು ಆತನ ಸಹೋದರಿಯರು ಹಲ್ಲೆ ನಡೆಸಿ ವಾಪಸ್ಸು ಕಳುಹಿಸಿದ್ದರು. ಈ ವೇಳೆ ರಸ್ತೆಯಲ್ಲಿ ಯುವತಿ ಅಳುತ್ತಿರುವುದನ್ನು ಕಂಡ ಸಾರ್ವಜನಿಕರು 112 ಗೆ ಮಾಹಿತಿ ನೀಡಿದ್ದರು. ಅದರಂತೆ ಕೊಣಾಜೆ ಠಾಣಾ ಪೊಲೀಸರು ಪಿಸಿಆರ್ ಮೂಲಕ ಯುವತಿಯನ್ನು ಇನ್ಫೋಸಿಸ್ ಬಳಿಯಿಂದ ಕರೆದುಕೊಂಡು ಠಾಣೆಗೆ ಹೋಗಿದ್ದರು. ಠಾಣೆಯಲ್ಲಿ ಯುವತಿ, ಮಹಮ್ಮದ್ ಅಜ್ವಿನ್ ನಿಂದ ತನಗಾದ ವಂಚನೆ ಕುರಿತು ತಿಳಿಸಿದ್ದಳು. ಅಲ್ಲದೆ ರೂ. 28 ಲಕ್ಷ ಹಣವನ್ನು ಪಡೆದು ತನಗರಿವಿಲ್ಲದೆ ಬೇರೆ ಮದುವೆಯಾಗಿರುವುದಾಗಿ ದೂರಿಕೊಂಡಿದ್ದಳು. ಈ ಕುರಿತ ಸಾಕ್ಷ್ಯಾಧಾರಗಳು ಆಕೆಯ ಜೊತೆಗೆ ಲಭ್ಯವಿರದ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ಪ್ರಕರಣ ದಾಖಲಿಸಿದಲ್ಲಿ ಉತ್ತಮ ಅನ್ನುವ ಸಲಹೆಯನ್ನು ನೀಡಿದ್ದರು. ಅದಕ್ಕೆ ಯುವತಿಯೇ ಒಪ್ಪಿಗೆ ಸೂಚಿಸಿ ಅಲ್ಲೇ ಹೊರಡುವುದಾಗಿ ತಿಳಿಸಿ, ಒಂಟಿಯಾಗಿ ಹೋಗಲು ಹೆದರಿಕೆಯಾಗುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಕೊಣಾಜೆ ಠಾಣೆಯ ಮಹಿಳಾ ಸಿಬ್ಬಂದಿ ಜೊತೆಗೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಿಡಲಾಗಿದೆ. ಇದಕ್ಕೆ ಕೊಣಾಜೆ ಠಾಣಾ ಸಿಬ್ಬಂದಿಗೆ ಯುವತಿಯೇ ಕರೆ ಮಾಡಿ ಕೃತಜ್ಞತೆ ಹೇಳಿರುವ ವಾಯ್ಸ್ ರೆಕಾರ್ಡನ್ನು ಸಹಾಯಕ ಪೊಲೀಸ್ ಆಯುಕ್ತರು ಪರಿಶೀಲಿಸಿದ್ದಾರೆ.
ಪಾಲುದಾರಿಕೆಯಲ್ಲಿ ಹೊಟೇಲ್ ಉದ್ಯಮ
2016 ರಲ್ಲಿ ಮಹಮ್ಮದ್ ಅಜ್ವಿನ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಜಾಮೀನು ಪಡೆದುಕೊಂಡಿದ್ದ ಆರೋಪಿ ಬಳಿಕ ಮೈಸೂರಿಗೆ ಉದ್ಯೋಗಕ್ಕೆಂದು ತೆರಳಿದ್ದನು. ಅಲ್ಲಿ 2017 ರಲ್ಲಿ ಹೊಟೇಲ್ ಉದ್ಯಮವನ್ನು ಆರಂಭಿಸಿದ್ದು, ಅದರಲ್ಲಿ ಯುವತಿ ಜತೆಗೆ ಹಣ ಪಡೆದುಕೊಂಡು ಆಕೆಯನ್ನು ಪಾಲುದಾರಿಕೆಯಲ್ಲಿ ಸೇರಿಸಿಕೊಂಡಿದ್ದ. ಹೀಗೆ ಇಬ್ಬರು ಉದ್ಯಮ ನಡೆಸುವ ಸಂದರ್ಭ ಅಜ್ವಿನ್ ಯುವತಿಯಿಂದ ಆಗಾಗ್ಗ ಹಣವನ್ನು ಪಡೆದುಕೊಳ್ಳುತ್ತಿದ್ದ. ಅಲ್ಲದೆ ಲೈಂಗಿಕವಾಗಿಯೂ ಬಳಸಿದ್ದನು. ಈ ನಡುವೆ ಯುವತಿಗೆ ಅರಿವಿಲ್ಲದಂತೆ ಊರಿನಲ್ಲಿ ಮದುವೆಯಾಗಿದ್ದನು. ಆದರೆ ಈತನ ಪತ್ನಿಗೆ ಮೈಸೂರಿನಲ್ಲಿ ಪತಿ ಅಜ್ವಿನ್ ಯುವತಿಯೋರ್ವಳ ಜತೆಗೆ ಸಂಪರ್ಕ ಇರುವ ವಿಚಾರ ತಿಳಿದು ಮದುವೆಯಾದ ಒಂದೇ ವರ್ಷದಲ್ಲಿ ತಲಾಖ್ ನೀಡಿದ್ದಳು. ಈ ವೇಳೆ ಅಜ್ವಿನ್ ಮನೆಮಂದಿಗೂ ಅಜ್ವಿನ್‍ಗೆ ಮೈಸೂರಿನ ಯುವತಿಯೋರ್ವಳ ಜತೆಗೆ ಸಂಪರ್ಕ ಇರುವ ಕುರಿತು ವಿಚಾರ ಗೊತ್ತಾಗಿದೆ. ಅವರು ಯುವತಿಗೆ ಅನ್ಯಾಯವಾಗಬಾರದು ಅನ್ನುವ ಉದ್ದೇಶದಿಂದ ಮೈಸೂರಿಗೆ ತೆರಳಿ ರಾಜಿ ಮಾತುಕತೆಗೆ ಯತ್ನಿಸಿ, ಅಜ್ವಿನ್ ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಯುವತಿ ಮದುವೆಗೆ ಒಪ್ಪದೇ ತನ್ನಿಂದ ಪಡೆದ ಲಕ್ಷಾಂತರ ಹಣವನ್ನು ವಾಪಸ್ಸು ಕೊಡುವಂತೆ ಮನೆಮಂದಿಯಲ್ಲಿ ತಿಳಿಸಿದ್ದಾಳೆ. ಆದರೆ ಅಜ್ವಿನ್ ಬಳಿ ಹಣವಿಲ್ಲದೇ ಇದ್ದುದರಿಂದ ಅಲ್ಲಿಂದ ಮರಳಿದ್ದರು. ಆದರೂ ಯುವತಿಯನ್ನು ಪುಸಲಾಯಿಸಿ ಆಕೆ ಜೊತೆಗೆ ಅಜ್ವಿನ್ ಸಂಪರ್ಕವನ್ನು ಮುಂದುವರಿಸಿದ್ದನು. ಈ ನಡುವೆ ಅಜ್ವಿನ್ ಎರಡನೇ ವಿವಾಹವಾಗಿದ್ದಾನೆ. ಇದು ಯುವತಿ ಗಮನಕ್ಕೆ ಬಂದಿದ್ದು, ಇದರಿಂದ ಆಕ್ರೋಶಿತಳಾಗಿ ಪಡೆದ ಹಣ ವಾಪಸ್ಸು ನೀಡುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಮತ್ತೆ ಯುವತಿ ಹಾಗೂ ಅಜ್ವಿನ್ ಮನೆಮಂದಿ ಜೊತೆಗೆ ದೂರವಾಣಿ ಮೂಲಕ ಗಲಾಟೆಗಳು ನಡೆಯುತ್ತಲೇ ಇತ್ತು. ಸೆ.21 ರಂದು ಯುವತಿ ಹಣ ಪಡೆಯಲೆಂದೇ ನೇರವಾಗಿ ಅಜ್ವಿನ್ ಮನೆಗೆ ಬಂದಿದ್ದಳು.

Exit mobile version