Site icon Ullalavani

ತಲಪಾಡಿ ರೇಷನ್ ಅಂಗಡಿ ಅವ್ಯವಸ್ಥೆ ಗಂಟೆಗಟ್ಟಲೆ ರೇಷನ್ ಪಡೆಯಲು ಸುಡುಬಿಸಿಲಿನಲ್ಲಿ ನಿಂತ ಮಹಿಳೆಯರು

UN networks

ತಲಪಾಡಿ: ತಲಪಾಡಿ ವಿಜಯಬ್ಯಾಂಕ್ ಬಳಿಯಿರುವ ರೇಷನ್ ಅಂಗಡಿಯಲ್ಲಿ ರೇಷನ್ ಪಡೆಯಲು ಮಹಿಳೆಯರು ಸಾಲುಗಟ್ಟಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸುಡುಬಿಸಿಲಿನಲ್ಲಿ ಕಾಯಬೇಕಾದ ಸ್ಥಿತಿ ಎದುರಾಗಿದೆ.


ಬೆಳಿಗ್ಗೆ 9.30 ಕ್ಕೆ ಬಂದು ರೇಷನ್ ಅಂಗಡಿಯೆದುರು ನಿಂತಿರುವ ಮಹಿಳೆಯರಿಗೆ ಮಧ್ಯಾಹ್ನ 12.30 ಆದರೂ ರೇಷನ್ ದೊರೆತಿಲ್ಲ. 1.ಕಿ.ಮೀ ಉದ್ದ ಸಾಲು ಇದ್ದು ಸುಡುಬಿಸಿಲು, ಮಳೆಯ ನಡುವೆ ಎಲ್ಲರೂ ಚೀಲ ಹಿಡಿದು ನಿಲ್ಲುವಂತಾಗಿದೆ. ರೇಷನ್ ನೀಡುವವರಲ್ಲಿ ಕೇಳಿದಾಗ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದಾರೆ. ಬೆಳಿಗ್ಗೆ ಅರ್ಧ ಗಂಟೆ ವೇಳೆ ಸರ್ವರ್ ಇತ್ತು, ಆನಂತರ ಹೋಗಿರುವ ಸರ್ವರ್ ವಾಪಸ್ಸು ಬಂದಿಲ್ಲ ಅನ್ನುತ್ತಾರೆ. ಅಲ್ಲದೆ ಗ್ರಾಹಕರು ಹೇಳುವ ಪ್ರಕಾರ ಹಿಂದಿನಿಂದಲೂ ಇದೇ ರೀತಿಯ ಸಮಸ್ಯೆ ರೇಷನ್ ಅಂಗಡಿಯಲ್ಲಿ ನಿರ್ಮಾಣವಾಗಿದೆ. ಎರಡು ದಿನಗಳಿಂದ ರೇಷನ್ನೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸರ್ವರ್ ಇಲ್ಲವೆಂದಾದಲ್ಲಿ ಅಂಗಡಿಗೆ ಶಟರ್ ಹಾಕಬಹುದಲ್ಲ. ಸುಮ್ಮನೆ ಕಾಯಿಸುವುದು ಏಕೆ? ಅನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಆಹಾರ ನಾಗರಿಕ ಸರಬರಾಜು ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಸರಿಪಡಿಸುವವರೆಗೇ ಶಟರ್ ಹಾಕಿ ಎಂದಿದ್ದಾರೆ. ಇದೇ ರೀತಿ ರೇಷನ್ ಗಾಗಿ ಕಾಯಿಸುವ ಪರಿಪಾಠ ಮುಂದುವರಿದಲ್ಲಿ ಗ್ರಾಮಸ್ಥರೇ ಸೇರಿ ರೇಷನ್ ಅಂಗಡಿಗೆ ಬೀಗ ಹಾಕಿ ಪ್ರತಿಭಟನೆಗೆ ಇಳಿಯುತ್ತೇವೆ. ಅಧಿಕಾರಿಗಳು ಬಂದು ಸಮಸ್ಯೆ ಬಗೆಹರೆಸುವವರೆಗೂ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಯಶು ಪಕಳ ತಿಳಿಸಿದ್ದಾರೆ.

Exit mobile version