UN networks
ಉಳ್ಳಾಲ: ಶ್ರೀ ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಇದರ ಆಶ್ರಯದಲ್ಲಿ ನಡೆದ 38 ನೇ ವರ್ಷದ ಶ್ರೀ ವಿದ್ಯಾ ವಿನಾಯಕ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯಿಂದ ಹಿಡಿದು ವಿಸರ್ಜನೆವರೆಗೂ ಎಲ್ಲಾ ಸಮುದಾಯದವರು ಭಾಗಿಯಾಗುವ ಮೂಲಕ ಈ ಬಾರಿಯ ಗಣೇಶೋತ್ಸವ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಕೆಥೋಲಿಕ್ ಸಮುದಾಯದವರೇ ಹೆಚ್ಚಿರುವ ಉಳ್ಳಾಲ ಹೊಯ್ಗೆಯ ಕಿಂಗ್ ಸ್ಟಾರ್ ಸೇವಾ ಸಮಿತಿ ಉಳ್ಳಾಲದ ಗಣೇಶೋತ್ಸವ ಕ್ಕೆ ಶುಭ ಕೋರಿದ್ದಲ್ಲದೆ, ಗಣೇಶ ವಿಗ್ರಹ ವಿಸರ್ಜನೆಯಲ್ಲಿ ಭಾಗವಹಿಸಿ ಬಳಿಕ ನಡೆದ ವಿಸರ್ಜನೆಯಲ್ಲಿ ಕಿಂಗ್ ಸ್ಟಾರ್ ನ ಸದಸ್ಯರೆಲ್ಲರೂ ಕೆರೆ ನೀರಿಗೆ ಇಳಿದು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಉತ್ಸವಕ್ಕೆ ಉಳ್ಳಾಲ ನಗರಸಭೆ ಸದಸ್ಯೆ ವೀಣಾ ಶಾಂತಿ ಡಿಸೋಜ, ನವೀನ್ ಡಿಸೋಜ, ರಿಯಾಝ್ ಮಂಗಳೂರು, ಪ್ರೇಮ್ ಪ್ರಕಾಶ್ ಡಿಸೋಜ, ಸಿರಿಲ್ ಜಾನ್ ಡಿಸೋಜ, ಶೈನಿ ಡಿಸೋಜ ಸ್ವಾಗತ ಕೋರಿದ್ದರು.
ಕೋಮು ಸೂಕ್ಷ್ಮ ಪ್ರದೇಶ ಎಂದು ಕರೆಯಲ್ಪಡುತ್ತಿರುವ ಉಳ್ಳಾಲಕ್ಕೆ ಗಣೇಶೋತ್ಸವ ಉತ್ತಮ ವಾತಾವರಣವನ್ನು ನಿರ್ಮಿಸುವ ಮೂಲಕ ಶಾಂತಿಯ ಉಳ್ಳಾಲ ಎಂಬುದನ್ನು ಸಾಬೀತುಪಡಿಸಿದೆ ಎಂಬುದು ನಗರಸಭೆ ಸದಸ್ಯರ ಅಭಿಪ್ರಾಯವಾಗಿದೆ.
ಉಳ್ಳಾಲ ಉಳಿಯ ಪ್ರಥಮ ಸೇತುವೆ ಇರುವ ಪ್ರದೇಶದಲ್ಲಿ ಪ್ರತಿವರ್ಷವೂ ಗಣೇಶನ ವಿಗ್ರಹವನ್ನು ವಿಸರ್ಜಿಸಲಾಗುತಿತ್ತು. ಆದರೆ ಹಿನ್ನೀರು ಪ್ರದೇಶ ಆಗಿರುವ ಸ್ಥಳದಲ್ಲಿ ಈ ಬಾರಿ ಕೊಳಚೆಯಿಂದ ತುಂಬಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ಹಿನ್ನಲೆಯಲ್ಲಿ ಸಮೀಪದಲ್ಲೇ ಇರುವ ಕ್ರೈಸ್ತ ಬಾಂಧವರೆಲ್ಲರೂ ವಿಸರ್ಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ .
