ಉಳ್ಳಾಲ: ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟ ಮೀನುಗಾರನನ್ನು ಐವರ ತಂಡ ರಕ್ಷಿಸಿರುವ ಘಟನೆ ಉಳ್ಳಾಲ ಅಳಿವೆಬಾಗಿಲು ಸಮೀಪ ಇಂದು ನಡೆದಿದೆ.
ಬೆಂಗ್ರೆ ನಿವಾಸಿ ನವಾಝ್ (೩೫) ರಕ್ಷಣೆಗೊಳಗಾದವರು. ಓಷಿಯನ್ ಬ್ರೀಝ್ ದೋಣಿಯಲ್ಲಿದ್ದ ಉಳಿಯ ನಿವಾಸಿ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್ ಡಿಸೋಜ ಹಾಗೂ ಬೆಂಗ್ರೆ ನಿವಾಸಿ ರಿತೇಶ್ ಮತ್ತು ಅಜಿತ್ ಎಂಬವರು ರಕ್ಷಿಸಿದವರಾಗಿದ್ದಾರೆ.
ಘಟನೆ ವಿವರ: ಆ.೨೭ ರಂದು ಬೆಳಿಗ್ಗೆ ನಾಡದೋಣಿ ಮೀನುಗಾರಿಕೆಯವರು ಸಮುದ್ರದಲ್ಲಿ ಬಲೆ ಹಾಕಿ ವಾಪಸ್ಸಾಗಿದ್ದರು. ಏಡಿ ಸಿಗುವ ಸಮಯವಾಗಿದ್ದರಿಂದಾಗಿ ಬಲೆ ಹಾಕಲಾಗಿತ್ತು. ಇಂದು ಬೆಳಿಗ್ಗೆ ಬಹುತೇಕ ದೋಣಿಯವರು ಹಾಕಿರುವ ಬಲೆಯನ್ನು ತೆಗೆಯಲು ಸಮುದ್ರಕ್ಕೆ ತೆರಳಿದ್ದರು. ಆದರೆ ಭಾರೀ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೋಣಿಗಳು ತೆರಳದೇ ಉಳಿದಿತ್ತು. ಆದರೆ ಹೋದಂತಹ ದೋಣಿಯೊಂದು ಬಲೆ ತೆಗೆದು ವಾಪಸ್ಸಾಗುವಾಗ ಅಳಿವೆಬಾಗಿಲು ಸಮೀಪ ಕಲ್ಲುಗಳ ಮಧ್ಯೆಯಿಂದ ಒಳಬರುವ ಸಂದರ್ಭ ಭಾರೀ ಗಾಳಿಯೊಂದು ಅಪ್ಪಳಿಸಿದಾಗ ಮೀನುಗಾರಿಕಾ ದೋಣಿಯಲ್ಲಿದ್ದ ನವಾಝ್ ಎಂಬವರು ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ ಅಲೆಗಳ ಅಪ್ಪಳಿಸುವಿಕೆಗೆ ದೋಣಿ ನಿಲ್ಲಿಸಲಾಗದೆ ಮೀನುಗಾರರು ಸಮುದ್ರಕ್ಕೆ ಬಿದ್ದವನ ರಕ್ಷಣೆಗೆ ಥರ್ಮಕೋಲನ್ನು ಎಸೆದು ವಾಪಸ್ಸಾಗಿದ್ದಾರೆ. ಇದೇ ಸಂದರ್ಭ ಓಷಿಯನ್ ಬ್ರೀಝ್ ಅನ್ನುವ ದೋಣಿಯೂ ಬಲೆ ತೆಗೆದು ವಾಪಸ್ಸಾಗುವ ಸಂದರ್ಭ ಮಾಲೀಕರು ಮೀನುಗಾರನೋವ ಸಮುದ್ರಕ್ಕೆ ಬಿದ್ದಿರುವುದರ ಮಾಹಿತಿ ನೀಡಿದ್ದರು. ಅದಕ್ಕಾಗಿ ಅರ್ಧ ಗಂಟೆಯ ಕಾಲ ಸಮುದ್ರದಲ್ಲೇ ಉಳಿದು ಹುಡುಕಾಡಿದ ತಂಡಕ್ಕೆ ನವಾಝ್ ದೂರದಲ್ಲಿ ಥರ್ಮಕೋಲನ್ನು ಹಿಡಿದು ರಕ್ಷಣೆಗೆ ಮೊರೆ ಹೋಗುವುದನ್ನು ಕಂಡರು. ಆದರೆ ಭಾರೀ ಗಾಳಿಗೆ ನವಾಝ್ ಇದ್ದ ಕಡೆಗೆ ದೋಣಿ ತೆರಳಲು ಸಾಧ್ಯವಾಗಲಿಲ್ಲ. ಆದರೂ ಧೈಯ ಮಾಡಿ ನವಾಝ್ ಬಳಿಗೆ ತೆರಳಿದ ತಂಡ ರೋಪ್ ಎಸೆದು ದೋಣಿಯೊಳಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಫೆ ಡೇ ಮಾಲೀಕ ಸಿದ್ದಾರ್ಥ್ ಪತ್ತೆ ಮಾಡಿದ್ದ ರಿತೇಶ್
೨೦೧೯ ರ ಜು. ೩೧ ರಂದು ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ನಡೆಸಿದ್ದ ಕೆಫೆ ಡೆ ಸಂಸ್ಥಾಪಕ , ಉದ್ಯಮಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅಳಿಯ ಸಿದ್ದಾರ್ಥ್ ಮೃತದೇಹ ಹೊಯ್ಗೆ ಬಝಾರ್ ಸಮೀಪ ಒಂದು ದಿನದ ಬಳಿಕ ಪತ್ತೆಯಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸರಕಾರಿ ಸಂಸ್ಥೆಗಳು ಪಾಲ್ಗೊಂಡಿದ್ದರೂ ಸಿದ್ದಾರ್ಥ್ ಪತ್ತೆ ಸಾಧ್ಯವಾಗಿರಲಿಲ್ಲ. ಆದರೆ ಈ ವೇಳೆ ಸ್ಥಳೀಯ ಮೀನುಗಾರರು ಮುಳುಗುತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮೀನುಗಾರ ರಿತೇಶ್ ಅವರಿಗೆ ಮೃತದೇಹ ನದಿ ಮಧ್ಯೆ ಕಾಣಿಸಿತ್ತು. ಅವರೇ ಮೃತದೇಹವನ್ನು ದಡದವರೆಗೂ ತಂದು ಪೊಲೀಸರಿಗೆ ಸಹಕರಿಸಿದ್ದರು.