Site icon Ullalavani

ಕಲ್ಲಿಕೋಟೆಯಿಂದ ನೇಪಾಳಕ್ಕೆ ಬೈಕ್‌ ಯಾತ್ರೆ ಕೈಗೊಂಡ ಕೇರಳ ಯುವಕರ ತಂಡ

UN networks

ಉಳ್ಳಾಲ: ಡಬ್ಬದಲ್ಲಿ ಹಣವನ್ನು ಕೂಡಿಟ್ಟು , ಸಮಾಜಕ್ಕೆ ಸೌಹಾರ್ದದ ಸಂದೇಶ ಹಾಗೂ ಸಾಯುವ ಮುನ್ನ ಅನಿಸಿದ್ದನ್ನು ಸಾಧಿಸು ಅನ್ನುವ ಉದ್ದೇಶವನ್ನು ಮುಂದಿಟ್ಟು ಕೇರಳದ ಹವ್ಯಾಸಿ ಬೈಕ್‌ ರೈಡರ್‌ಗಳ ಒಂಭತ್ತು ಮಂದಿಯ ತಂಡ ಕಲ್ಲಿಕೋಟೆಯಿಂದ – ನೇಪಾಳ ಪ್ರವಾಸವನ್ನು ಆರಂಭಿಸಿದೆ. ಆ.೨೭ ರಂದು ಪ್ರವಾಸವನ್ನು ಆರಂಭಿಸಿದ ತಂಡ ಇಂದು ದೇರಳಕಟ್ಟೆಯನ್ನು ತಲುಪಿದೆ. ಅಲ್ಲಿಂದ ಐದು ಬೈಕುಗಳಲ್ಲಿ ಪ್ರವಾಸ ಮುಂದುವರಿಸಿದ ತಂಡ ಇಂದು ಗೋಕರ್ಣ ತಲುಪಿ ಅಲ್ಲೇ ಉಳಿಯಲಿದೆ.


ಕೋಝಿಕ್ಕೋಡ್‌, ಮಲಪ್ಪುರಂ, ತಿರುವನಂತಪುರಂ ನಿವಾಸಿಗಳಾದ ಸಂಶುದ್ದೀನ್‌, ಬಾಷಿತ್‌, ಪ್ರಷೀಬ್‌, ಸಾಹಿರ್‌ ಬಾಬು, ಮುನವ್ವಿರ್‌, ಶಫೀಖ್‌, ಸುಹೈಬ್‌ ಅಖ್ತರ್‌, ಜ್ಯಾಕ್ಸನ್‌ ಥಾಮಸ್‌ , ಫೈಝಲ್‌ ದೇರಳಕಟ್ಟೆ ಎಂಬವರ ತಂಡ ಪ್ರಯಾಣ ಆರಂಭಿಸಿದೆ.
ಕಾಲೇಜು ಜೀವನದಲ್ಲಿ ಇತರರು ಬೈಕಿನಲ್ಲಿ ಪ್ರಯಾಣಿಸುವುದನ್ನು ಕಂಡು ಪ್ರೇರಣೆಗೊಂಡು ತಾವು ಕೂಡಾ ಬೈಕ್‌ ಮೂಲಕ ದೇಶ ಸುತ್ತಬೇಕೆಂಬ ಕನಸನ್ನು ಸಾಕಾರಗೊಳಿಸಲು ಪ್ರಯಾಣ ಆರಂಭಿಸಿದ್ದಾರೆ. ಕೋವಿಡ್‌ ನಿರ್ಭಂಧನೆಗಳು ಇರುವುದರಿಂದ ೭೩ ಗಂಟೆಗಳ ಆರ್‌ ಟಿಪಿಸಿಆರ್‌ ವರದಿ ಹಾಗೂ ಎರಡು ವ್ಯಾಕ್ಸಿನ್‌ ಪಡೆದುಕೊಂಡೇ ಯುವಕರ ತಂಡ ಕಾಶ್ಮೀರ ಹೊರಟಿದೆ. ಹಿಂದಿನಿಂದಲೂ ಯೋಜನೆ ರೂಪಿಸಿದ್ದ ತಂಡದ ಸದಸ್ಯರಲ್ಲಿ ಹಲವರು ಪ್ರವಾಸಕ್ಕೆ ರೂ.೧ ಲಕ್ಷದಷ್ಟು ವೆಚ್ಛ ಸಾಧ್ಯತೆ ಇರುವುದರಿಂದ ಹಣವನ್ನು ಕೂಡಿಟ್ಟಿದ್ದರು. ಅದನ್ನು ಬಳಸಿಕೊಂಡು ಪ್ರಯಾಣ ಮುಂದುವರಿಸಿರುವರು. ಸುರಕ್ಷತಾ ಕ್ರಮಕ್ಕಾಗಿ ವೈದ್ಯಕೀಯ ಕಿಟ್‌, ಉಳಿದುಕೊಳ್ಳಲು ಟೆಂಟ್‌ ವ್ಯವಸ್ಥೆ , ಬಟ್ಟೆ ಹಾಗೂ ಬೈಕ್‌ ಟೂಲ್ಸ್‌ ಗಳನ್ನು ಜತೆಯಲ್ಲಿಟ್ಟುಕೊಂಡಿದೆ. ದಿನವೊಂದಕ್ಕೆ ೩೦೦ ಕಿಮೀ ಸಾಗಬೇಕು , ಉಳಿದುಕೊಳ್ಳುವ ಹಾಗೂ ದಾರಿಯ ಕುರಿತು ಈಗಾಗಲೇ ಹೋಗಿ ಬಂದವರ ಜತೆಗೆ ಅನುಭವವನ್ನು ಹಂಚಿಕೊಂಡಿದ್ದೇವೆ. ದಾರಿಯುದ್ದಕ್ಕೂ ಆಗುವ ಅನುಭವಗಳನ್ನು ಗೋಪ್ರೋ ಕ್ಯಾಮರಾ ಮೂಲಕ ಸೆರೆಹಿಡಿದು, ತಮ್ಮ ಯುಟ್ಯೂಬ್‌ ಛಾನೆಲ್‌ ನಲ್ಲಿ ಪ್ರಸಾರ ಮಾಡಲಿದ್ದಾರೆ. ಎಫ್‌-ಝೀ, ಜಾವಾ, ಸುಝುಕಿ, ಪಲ್ಸಾರ್‌, ರಾಯಲ್‌ ಎನ್ಫೀಲ್ಡ್‌ ಬೈಕುಗಳಲ್ಲಿ ಪ್ರವಾಸ ಕೈಗೊಂಡಿರುವ ತಂಡದಲ್ಲಿ ಅಧ್ಯಾಪಕ, ಬ್ಯಾಂಕ್‌ ಸಿಬ್ಬಂದಿ, ವಿದ್ಯಾರ್ಥಿ, ಪೈಟಿಂಗ್‌ ಗುತ್ತಿಗೆದಾರ, ಇಬ್ಬರು ವ್ಯಾಪರಸ್ಥರು ಇದ್ದಾರೆ. ಓರ್ವ ವಿವಾಹಿತನಾಗಿದ್ದರೆ, ಉಳಿದವರೆಲ್ಲರೂ ಅವಿವಾಹಿತರು. ಮನೆಯವರ ಬೆಂಬಲದಿಂದಲೇ ಪ್ರವಾಸ ಕೈಗೊಂಡಿದ್ದೇವೆ ಅನ್ನುವುದು ತಂಡದ ಅಭಿಪ್ರಾಯ.
ʻ ದ್ವಿತೀಯ ಪಿಯುಸಿಯಲ್ಲಿರಬೇಕಾದರೆ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುವಾಗ ಹಲವು ಬುಲೆಟ್‌ ಗಳಲ್ಲಿ ಯುವಕರ ತಂಡ ಕಾಶ್ಮೀರ ಪ್ರವಾಸ ಹೊರಟಿತ್ತು. ೨೦೧೨ ರಲ್ಲಿ ನೋಡಿದ ದೃಶ್ಯ ಮನದಲ್ಲಿ ಅಚ್ಚಳಿದು ಉಳಿದು, ತಾನು ಕೂಡಾ ಇದೇ ರೀತಿಯಲ್ಲಿ ದೂರದ ಕಾಶ್ಮೀರದವರೆಗೂ ಬೈಕಿನಲ್ಲೇ ಹೋಗಬೇಕೆಂಬ ಕನಸು ಕಂಡಿದ್ದರು. ೨೦೧೯ ರಿಂದ ಕನಸು ನನಸಾಗಿಸುವ ಉದ್ದೇಶದಿಂದ ಡಬ್ಬವೊಂದರಲ್ಲಿ ವೇತನದ ಇಂತಿಷ್ಟು ಭಾಗವನ್ನು ಅದಕ್ಕಾಗಿ ಶೇಖರಣೆ ಮಾಡಲು ಆರಂಭಿಸಿದರು. ಇದೀಗ ೨೦೨೧ ರಲ್ಲಿ ಕನಸು ಸಾಕಾರಗೊಳ್ಳುವ ಸಮಯ ಬಂದಿತು. ಪ್ರವಾಸಕ್ಕೆ ಸಾಕಾಗುವಷ್ಟು ಹಣ ಸಂಗ್ರಹಣೆಯಾದಾಗ ಜಿಕ್ಸರ್‌ ಆರ್‌ ಸಿ ಕ್ಯಾಲಿಕಟ್‌, ಬಿಆರ್‌ ಸಿ ಮಲಪ್ಪುರ, ಮುಸಾಫಿರ್‌ ರೈಡರ್ಸ್‌ ಆಲ್‌ ಕೇರಳ ಅನ್ನುವ ವಾಟ್ಸ್ಯಾಪ್‌ ಗುಂಪಿನ ಸದಸ್ಯರಲ್ಲಿ ವಿಷಯ ಪ್ರಸ್ತಾಪಿಸಿದಾಗ ಕೇರಳದ ವಿವಿಧ ಜಿಲ್ಲೆಗಳಿಂದ ಎಂಟು ಮಂದಿಯ ತಂಡ ತುದಿಗಾಲಲ್ಲಿ ನಿಂತಿತ್ತು. ಅದರಂತೆ ಆ.೨೭ ರಂದು ಕಲ್ಲಿಕೋಟೆಯ ಮುಕ್ಕಾಂ ನಿಂದ ಬೈಕ್‌ ರೈಡ್‌ ಆರಂಭಿಸಿ ತಿಂಗಳ ಅವಧಿಯಲ್ಲಿ ಸಾವಿರಕ್ಕೂ ಅಧಿಕ ಕಿ.ಮೀ ಸಾಗಿ ಕಾಶ್ಮೀರ, ನೇಪಾಳ ಮತ್ತು ಭೂತಾನ್‌ ತಲುಪುವ ಇಚ್ಛೆಯನ್ನು ಹೊಂದಿದ್ದೇವೆʼ ಅನ್ನುತ್ತಾರೆ ಕಲ್ಲಿಕೋಟೆ ವಿಶ್ವವಿದ್ಯಾನಿಲಯ ಅಧೀನದ ಕಾಕಂಜೇರಿ ನವಭಾರತ್‌ ಮಾಡೆಲ್‌ ಸ್ಕೂಲ್‌ ನಲ್ಲಿ ಅಧ್ಯಾಪಕರಾಗಿರುವ ಸಂಶುದ್ಧೀನ್‌ ಇವರು.

Exit mobile version