
ಉಳ್ಳಾಲ: ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಕೊಠಡಿಯ ಸಮೀಪವೆ ಇದ್ದ ಲ್ಯಾಬ್‍ನಲ್ಲಿ ಬೆಂಕಿ ಅವಘಡ ಸಂಭವಿಸಿ ಇಡೀ ಲ್ಯಾಬ್ ಹೊತ್ತಿ ಉರಿದ ಘಟನೆ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ಬೆಂಕಿ ಅವಘಡ ಸಂಭವಿಸಿದ ಲ್ಯಾಬ್ ಇದ್ದ ಕಟ್ಟಡದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಅವರನ್ನೆಲ್ಲಾ ಕರ್ತವ್ಯದಲ್ಲಿದ್ದ ಶಿಕ್ಷಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.
ಸರ್ವಿಸ್ ಲೈನ್‍ನಲ್ಲಿನ ವಿದ್ಯುತ್ ಏರಿಳಿತವೇ ಈ ಅವಘಡಕ್ಕೆ ಕಾರಣ ಎಂದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಸ್ಥಳಕ್ಕೆ ನಗರ ಪೆÇಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದರು.
200 ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. 10.30 ಗೆ ಪರೀಕ್ಷೆ ಆರಂಭವಾದರೆ 10.45ರ ಸಮೀಪ ಬಯೋಲಾಜಿ ಲ್ಯಾಬ್ ನಲ್ಲಿ ಹೊಗೆ ಆವರಿಸಿತು. ಸ್ವಲ್ಪ ಹೊತ್ತಿನಲ್ಲಿ ಬೆಂಕಿಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ಥಳ ಸೂಕ್ತವಲ್ಲ ಎಂದು ಇನ್ನೊಂದು ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ಸೆಂಟರ್ ಇನ್ಚಾರ್ಜ್, ಎಸ್‍ಎಸ್‍ಎಲ್‍ಸಿ ಬೋರ್ಡಿನವರು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಮಾಹಿತಿ ನೀಡಿದರು.