
ಉಳ್ಳಾಲ: ದೇಶದ ಸೈನಿಕರು, ಪಾರ್ಲಿಮೆಂಟ್ ವ್ಯವಸ್ಥೆ, ವಿಜ್ಞಾನಿಗಳ ಮೇಲೆ ನಂಬಿಕೆಯಿಲ್ಲದ ಕಾಂಗ್ರೆಸ್ ಪಕ್ಷದಿಂದ ಜನತೆ ಯಾವುದನ್ನೂ ನಿರೀಕ್ಷಿಸುವುದಿಲ್ಲ, ಸದೃಢವಾಗಿ ನಿಶ್ಚಿತ ಧಿಕ್ಕಿನೆಡೆಗೆ ಕೊಂಡೊಯ್ಯುತ್ತಿರುವ ಬಿಜೆಪಿ ಸರಕಾರದ ಮೇಲೆ ಅಪಾರ ನಂಬಿಕೆ ಉಳಿದಿದದೆ. ಅದಕ್ಕಾಗಿ ಕಾರ್ಯಕರ್ತರು ಸಮಾಜದ ನಿರೀಕ್ಷೆಗೆ , ಪರೀಕ್ಷೆಗೆ ಸರಿಯಾಗಿ ಉತ್ತರದ ಉತ್ತರದಾಯಿತ್ವದ ಸ್ಥಾನದಲ್ಲಿ ನಿಲ್ಲಬೇಕು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜ ಭವನದಲ್ಲಿ ಸೋಮವಾರ ಆಯೋಜಿಸಲಾದ ಬಿಜೆಪಿ ಮಂಗಳೂರು ಮಂಡಲ ವಿಶೇಷ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಪೂಜೆಗೆ ಸೀಮಿತಗೊಂಡ ಪಕ್ಷವಲ್ಲ, ಘೋಷಣೆಗಳು ಬಲಯುತವಾಗಿರಬೇಕು, ಭಾವಯುತವಾಗಿರಬೇಕು ಇದರಿಂದ ದೇಶ ಶಕ್ತಿಯುತವಾಗಿ ಬೆಳಗಲು ಸಾಧ್ಯ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎರಡು ಅವಧಿಗಳ ಕಾಲ, ಕಾಂಗ್ರೆಸ್ಸೇತರ ಸರಕಾರ ರಾಷ್ಟ್ರವನ್ನು ಆಳುತ್ತಿದೆ. ಕರ್ನಾಟಕದಲ್ಲಿಯೂ ಉತ್ತಮ ಆಡಳಿತವನ್ನು ನೀಡಿದೆ. ಆದರೆ ಕಾಂಗ್ರೆಸ್ಸಿನ ಸುಳ್ಳು ಅಪಪ್ರಚಾರಗಳಿಂದ ಗೊಂದಲಗಳಾಗುತ್ತಿವೆ.ಕಾರ್ಯಕರ್ತರಲ್ಲಿಯೂ ಹೇಳಿಕೆಗಳು, ಬೆಳವಣಿಗೆಗಳು, ಗೊಂದಲಗಳು ಮನಸ್ಸಿನಲ್ಲಿ ಮೂಡಿದರೆ , ಉದ್ದೇಶದ ಪುನರುಚ್ಛಾರ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಅಪಾಯಕಾರಿ, ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಮತ್ತಷ್ಟು ಅಪಾಯಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‍ಹೌಸ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಗಳೂರು ಮಂಡಲ ಪ್ರಭಾರಿ ಕಸ್ತೂರಿ ಪಂಜ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಮಂಗಳೂರು ಮಂಡಲ ಪ್ರಭಾರಿಗಳಾದ ಈಶ್ವರ್ ಕಟೀಲ್ ಉಪಸ್ಥಿತರಿದ್ದರು.
ಕ್ಷೇತ್ರ ಪ್ರ.ಕಾ ಹೇಮಂತ್ ಶೆಟ್ಟಿ ಅಂತರ್ಜಲ ಇಂಗಿಸುವಿಕೆ ಸಂಕಲ್ಪವನ್ನು ತೊಟ್ಟರು.
ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಯಶವಂತ ಅಮೀನ್ ಸ್ವಾಗತಿಸಿದರು.