Site icon Ullalavani

ಸಿಪಿಐಎಂನಿಂದ ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ

ಉಳ್ಳಾಲ: ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುವ ಸಂದರ್ಭದಲ್ಲೇ ವಿದ್ಯುತ್ ಬಿಲ್ ಅನ್ನೂ ಏರಿಕೆ ಮಾಡಲಾಗಿದೆ. ಕೋವಿಡ್ ಸಂಧಿಗ್ಧ ಸ್ಥಿತಿಯಲ್ಲೂ ಜನಸಾಮಾನ್ಯನ ಪರವಾಗಿ ನಿಲ್ಲದ ಸರಕಾರಗಳು ಜನವಿರೋಧಿಯಾಗಿದೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.
ಅವರು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಸಿಪಿಐಎಂ ಉಳ್ಳಾಲ ವಲಯ ಸಮಿತಿ ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ವಿದ್ಯುತ್ ದರ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೆಟ್ರೋಲ್, ಡಿಸೀಲ್, ಗ್ಯಾಸ್, ವಿದ್ಯುತ್ ಬೆಲೆ ಏರಿಕೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಕೈಗಾರಿಕೆಗಳು ಬಂದ್ ಆಗಿವೆ, ಉದ್ಯೋಗವಿಲ್ಲದೆ ನಿರುದ್ಯೋಗದ ಸ್ಥಿತಿಯಲ್ಲಿದ್ದಾರೆ. ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದಾರೆ. ಆದರೂ ಸರಕಾರ ವಿದ್ಯುತ್ ಬಿಲ್ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಕಳೆದ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಘೋಷಿಸಿದ ಸಹಾಯಧನ ಈವರೆಗೆ ತಲುಪಿಲ್ಲ. ಶೀಘ್ರವೇ ಸರಕಾರ ಜನರ ಬಗ್ಗೆ ಕಾಳಜಿ ವಹಿಸಿ ವಿದ್ಯುತ್ ಬಿಲ್‍ನಲ್ಲಿ ಕಡಿತಗೊಳಿಸಿ ಕಟ್ಟಲು ಸಮಯವಕಾಶ, ಆಹಾರ ಕಿಟ್ ವಿತರಣೆ, ಕಾರ್ಮಿಕರಿಗೆ ಸಹಾಯಧನ ವಿತರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಿಪಿಐಎಂ ವಲಯ ಸಮಿತಿ ಸದಸ್ಯೆ ವಿಲಾಸಿನಿ ತೊಕ್ಕೊಟ್ಟು, ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ ಶೆಟ್ಟಿ , ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಜಯಂತ್ ನಾಯ್ಕ್ , ಸುಂದರ ಕುಂಪಲ, ಜನಾರ್ದನ ಕುತ್ತಾರ್, ಚಂದ್ರಹಾಸ್ ಪಿಲಾರ್, ಶೇಖರ್ ಕುಂದರ್, ಇಬ್ರಾಹಿಂ ಮದಕ, ಚಂದ್ರಹಾಸ್ ಕುತ್ತಾರ್, ಕಮಲಾಕ್ಷ ಕಲ್ಲಾಪು, ಕೃಷ್ಣ ಕುಂಪಲ, ಜಯರಾಮ ಕುತ್ತಾರ್, ವಿಶ್ವನಾಥ ಶೆಟ್ಟಿ ಚೆಂಬುಗುಡ್ಡೆ , ನಾರಾಯಣ ತಲಪಾಡಿ ಮುಂತಾದವರು ಉಪಸ್ಥಿತರಿದ್ದರು.

Exit mobile version