ಉಳ್ಳಾಲ: ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್‍ಫೋಸಿಸ್ ಪೌಂಡೇಷನ್‍ನಿಂದ ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಗೆ ಸ್ಥಳೀಯರಿಂದ ಯಾವುದೇ ವಿರೋಧ ಇಲ್ಲ ಆದರೆ ಈ ಯೋಜನೆಯನ್ನು ಈ ಹಿಂದೆ ನಿಗದಿ ಪಡಿಸಿದ ರುದ್ರಭೂಮಿಗೆ ಸೇರಿದ ಖಾಲಿ ಜಾಗದಲ್ಲಿ ನಿರ್ಮಿಸಬೇಕು ಮತ್ತು ಆ ಜಾಗದ ಆರ್ಟಿಸಿ ರುದ್ರಭೂಮಿಯ ಹೆಸರಿಗೆ ಆಗಬೇಕು. ಸ್ಥಳೀಯರಿಗೆ ಯಾವುದೇ ಮಾಹಿತಿ ಪಡೆದುಕೊಳ್ಳದೆ ಇಕ್ಕಟ್ಟಾಗಿರುವ ಈಗಿರುವ ರುದ್ರಭೂಮಿಯಲ್ಲಿ ತುರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸುವುದಕ್ಕೆ ಸ್ಥಳೀಯರ ವಿರೋಧವಿದೆ ಎಂದು ರುದ್ರಭೂಮಿ ಪರಿಸರದ ಹೋರಾಟ ಸಮಿತಿಯ ಮುಖಂಡ ಸಂತೋಷ್ ಕುಮಾರ್ ತಿಳಿಸಿದರು.
ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕನ ನೆಲೆಯಲ್ಲಿ ಯು.ಟಿ. ಖಾದರ್ ಅವರು ಜಿಲ್ಲಾಡಳಿತ ನೆರವಿನೊಂದಿಗೆ ಉತ್ತಮ ಯೋಜನೆಯನ್ನು ತಂದಿದ್ದಾರೆ. ಆದರೆ ಯೋಜನೆ ರೂಪಿಸುವ ಮೊದಲೇ ವಿದ್ಯುತ್ ಚಿತಾಗಾರಕ್ಕೆ ರುದ್ರಭೂಮಿಗೆ ಸೇರಿದ ಖಾಲಿ ಜಾಗವನ್ನು ಬಳಸಿಕೊಳ್ಳಲು ನಿರ್ಣಯ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಾಸಕರು ಸ್ಥಳೀಯ ಅಭಿಪ್ರಾಯ ಸಂಗ್ರಹಿಸಿ ಯೋಜನೆ ರೂಪಿಸುವ ಭರವಸೆ ನೀಡಿದ್ದರು. ಆದರೆ ಇದೀಗ ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆಯಿಲ್ಲದಂತಾಗಿದ್ದು, ಸ್ಥಳೀಯರಿಗೆ ಮಾಹಿತಿ ನೀಡದೆ ಈಗಿರುವ ರುದ್ರಭೂಮಿಯ ಸ್ಥಳದಲ್ಲಿ ಶಿಲಾನ್ಯಾಸ ನೆವೇರಿಸಲು ಮೂರು ಬಾರಿ ಪ್ರಯತ್ನ ಮಾಡಿರುವುದು ಮತ್ತು ಸ್ಥಳೀಯ ಪ್ರತಿನಿಧಿಗಳನ್ನು ಪೆÇಲೀಸ್ ಠಾಣೆಗೆ ಕರೆಸಿ ಶಂಕುಸ್ಥಾಪನೆಗೆ ಹೋದಲ್ಲಿ ಕೋವಿಡ್ ಸಾಂಕ್ರಾಮಿಕ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗುವುದು ಎಂದು ನೋಟೀಸ್ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದರು.
ಹಿಂದೂ ರುದ್ರಭೂಮಿಯ 1.57 ಎಕ್ರೆ ಪ್ರದೇಶದಲ್ಲಿ 72 ಸೆಂಟ್ಸ್ ಜಾಗವನ್ನು ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನೀಡಲಾಗಿದೆ. ಉಳಿದ 80 ಸೆಂಟ್ಸ್‍ನಲ್ಲಿ 40 ಸೆಂಟ್ಸ್ ಜಾಗ ಮಾತ್ರ ರುದ್ರಭೂಮಿಗೆ ಆರ್ಟಿಸಿ ಮಾಡಲಾಗಿದ್ದು, ಚಿತಾಗಾರ ಉದ್ಧೇಶಿತ ಜಾಗವನ್ನು ರುದ್ರಭೂಮಿಯ ಹೆಸರಲ್ಲಿ ನಮೂದಿಸದೆ ಚಿತಾಗಾರ ನಿರ್ಮಾಣದ ಜಾಗವನ್ನು ಬದಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಶಿಲಾನ್ಯಾಸಕ್ಕೆ ಗುರುತಿಸಿರುವ ಜಾಗ ಇಕ್ಕಟ್ಟಾಗಿದ್ದು , ಶಾಲೆ, ನಾಗನ ಕಟ್ಟೆ ಎದುರಿಗಿದ್ದು, ಇನ್ನೊಂದು ಕಡೆ ಸಿಲಿಕಾನ್ ಶವಾಗಾರದ ಹೊಗೆ ವಿದ್ಯುತ್ ಚಿತಾಗಾರಕ್ಕೆ ಹಾನಿ ಮಾಡಲಿದೆ. ಈ ಎಲ್ಲಾ ನಿಟ್ಟಿನಲ್ಲಿ ರುದ್ರಭೂಮಿಯ ಖಾಲಿ ಜಾಗವೇ ಸೂಕ್ತ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರುದ್ರಭೂಮಿ ನಿರ್ವಹಣಾ ಸಮಿತಿ ಕೋಶಾಧಿಕಾರಿ ರಮೇಶ್ ಮೆಂಡನ್, ಸದಸ್ಯ ಶೇಖರ ಚೆಂಬುಗುಡ್ಡೆ, ಸೋಮಸುಂದರ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.