
ಉಳ್ಳಾಲ: ಶಾಸಕ ಯು.ಟಿ. ಖಾದರ್ ಅವರು ತೊಕ್ಕೊಟ್ಟು ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ಅಳವಡಿಸಲು ಇನ್‍ಫೋಸಿಸ್‍ನಂತಹ ಒಂದೂವರೆ ಕೋಟಿ ರೂ. ಅನುದಾನ ತರುವುದರ ವಿರುದ್ಧ ಭೂಕಬಳಿಕೆ ಸ್ವರೂಪ ನೀಡುವುದು ಶೋಭೆ ತರುವುದಿಲ್ಲ ಕಾಂಗ್ರೆಸ್ ಹಿರಿಯ ಮುಖಂಡ ಈಶ್ವರ್ ಉಳ್ಳಾಲ್ ಹೇಳಿದರು.
ತೊಕ್ಕೊಟ್ಟಿನಲ್ಲಿ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯು.ಟಿ.ಖಾದರ್ ಅವರು ತಾನೊಬ್ಬ ಮುಸ್ಲಿಮ್ ಧರ್ಮೀಯನಾದರೂ ಸಹ ಬಹಳ ಮುತುವರ್ಜಿ ವಹಿಸಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್‍ಫೋಸಿಸ್‍ನಿಂದ ಒಂದೂವರೆ ಕೋಟಿ ರೂ. ಅನುದಾನ ತಂದಿದ್ದಾರೆ. ಆದರೆ ಕೆಲವರು ರಾಜಕೀಯ ಹಗೂ ವೈಯಕ್ತಿಕ ಪ್ರತಿಷ್ಠೆಗಾಗಿ ಭೂಕಬಳಿಕೆ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಇರುವ ಒಂದೂವರೆ ಕೋಟಿ ಅನುದಾನದಲ್ಲಿ ಈಗಿರುವ ಕಟ್ಟಿಗೆಯ ಚಿತಾಗಾರದ ಬಳಿಯಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲು ಸಾಧ್ಯ. ಹತ್ತಿರದ ಶವ ಹೂಳುವ 45ಸೆಂಟ್ಸ್ ಜಾಗದಲ್ಲಿ ನಿರ್ಮಿಸೋದಾದರೆ 50ಲಕ್ಷ ರೂ. ಗಳಿಗೂ ಹೆಚ್ಚಿನ ಮೊತ್ತ ಅಗತ್ಯತೆ ಇದೆ ಎಂದು ಕಂಪನಿ ಪ್ರಮುಖರು ಹೇಳಿದ್ದಾರೆ. ಉಳ್ಳಾಲದ ಇತಿಹಾಸದಲ್ಲೇ ಯಾರೊಬ್ಬ ನಾಯಕರೂ ರುದ್ರಭೂಮಿಗೆ ಇಷ್ಟೊಂದು ದೊಡ್ಡ ಅನುದಾನ ತಂದಿಲ್ಲ. ಆದರೂ ಭೂಕಬಳಿಕೆ ಎಂದು ಗುಳ್ಳೆಬ್ಬಿಸಿ ಶಾಸಕ ಯು.ಟಿ. ಖಾದರ್ ಅವರನ್ನು ಎತ್ತಿ ಕಟ್ಟುತ್ತಿರುವುದು ಸರಿಯಲ್ಲ ಎಂದರು.
ಮುಖಂಡರಾದ ಸುರೇಶ್ ಭಟ್ನಗರ ಮಾತನಾಡಿ ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಗೆ ಅನೇಕ ವರ್ಷಗಳ ಇತಿಹಾಸವಿದೆ. ಇನ್ನು ಇದನ್ನ ಕಬಳಿಸೋ ಪ್ರಶ್ನೆ ಎಲ್ಲಿಂದ ಬರುತ್ತೆ. ವಿದ್ಯುತ್ ಚಿತಾಗಾರ ನಿರ್ಮಾಣವಾಗೋ ವಿಚಾರವನ್ನು ಸ್ಮಶಾನದ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅವರಲ್ಲಿ ಹೇಳಿದಾಗ ಅವರೂ ಆ ಯೋಜನೆಯನ್ನ ಪ್ರಶಂಸಿದ್ದಾರೆ. ಪ್ರಸ್ತುತ ಈ ಸ್ಮಶಾನದಲ್ಲಿ ಶವ ಸುಡಲು ಸುಮಾರು 4000ರೂ. ಖರ್ಚು ತಗಲುತ್ತಿದ್ದು, ಕೇವಲ 200ರೂ. ಖರ್ಚಿನಲ್ಲಿ ಜನರು ಶವ ಸುಡುವಂತಾಗಲಿ ಎಂಬ ಸದುದ್ದೇಶದಿಂದ ಯು.ಟಿ.ಖಾದರ್ ಅವರು ಈ ಯೋಜನೆಯನ್ನ ತಂದಿದ್ದಾರೆ. ಎಂದ ಚೆಂಬುಗುಡ್ಡೆ ಪ್ರದೇಶ ಎತ್ತರ ಇರೋದರಿಂದ ಸ್ಮಶಾನಕ್ಕೆ ಕಾಯ್ದಿರಿಸಿದ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಿಸಲಾಯಿತು. ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಸಿಗಬೇಕೆಂಬ ಸದುದ್ದೇಶದಿಂದ ಶಾಸಕರು ಈ ಕಾಮಗಾರಿ ನಡೆಸಿದರೂ ಅದಕ್ಕೂ ಸ್ಮಶಾನದ ಜಾಗ ಮಾರಾಟ ನಡೆಸಿದ್ದಾರೆಂದು ಅಪಪ್ರಚಾರ ನಡೆಸಿದರು. ಶಾಸಕ ಯು.ಟಿ ಖಾದರ್ ಅವರಿಂದ ಹಿಂದೂಗಳಿಗೆ ಎಂದಿಗೂ ಅನ್ಯಾಯವಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಕೆ., ಸದಸ್ಯರಾದ ಶಶಿಕಲಾ, ಪ್ರಮುಖರಾದ ದೀಪಕ್ ಪಿಲಾರ್, ನಾಗೇಶ್ ಶೆಟ್ಟಿ, ವಸಂತ್ ಭಟ್ನಗರ ಹಾಗೂ, ಕಿಶೋರ್ ಉಪಸ್ಥಿತರಿದ್ದರು.