Site icon Ullalavani

ಕೇರಳದಿಂದ ಜಿಲ್ಲೆ ಪ್ರವೇಶಿಸುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ : ದ.ಕ ಜಿಲ್ಲಾಧಿಕಾರಿ


ಉಳ್ಳಾಲ: ಕೇರಳದಲ್ಲಿ  ಡೆಲ್ಟಾ ಪ್ಲಸ್ ವೇರಿಯಂಟ್  ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ  ರಾಜ್ಯ ಸರಕಾರದ ನಿರ್ದೇಶನದಂತೆ ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯನ್ನು ಪ್ರವೇಶಿಸುವವರು ಕಡ್ಡಾಯವಾಗಿ ಆರ್ ಟಿ ಪಿಸಿಆರ್ ವರದಿಯನ್ನು ತೋರಿಸಿಯೇ ಒಳಪ್ರವೇಶಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಹೇಳಿದ್ದಾರೆ.ಕೇರಳ ಗಡಿಭಾಗ  ತಲಪಾಡಿಯಲ್ಲಿ ಇಂದು ಬೆಳಿಗ್ಗೆ  ಕೇರಳದಿಂದ ಬರುವ  ಮಂದಿಯನ್ನು ತಪಾಸಣೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೇರಳ ಮತ್ತು ದ.ಕ ನಡುವೆ ಇರುವ ಎಲ್ಲಾ  ಚೆಕ್ ಪೋಸ್ಟ್ ಗಳನ್ನು ಸಕ್ರಿಯವಾಗುವಂತೆ ಆದೇಶಿಸಲಾಗಿದೆ. ತಲಪಾಡಿ, ನೆಟ್ಟಣಿಗೆ-ಮುಡ್ನೂರು, ಸಾರಡ್ಕ,  ಜಾಲ್ಸೂರು ಭಾಗದ ಚೆಕ್ ಪೋಸ್ಟ್ ಗಳು ನಾಳೆಯಿಂದ   24 ಗಂಟೆಗಳ ಕಾಲ ಕಾರ್ಯಾಚರಿಸಲಿದೆ.  ಜನಸಂಚಾರ ಹೆಚ್ಚಿರುವ ಗ್ರಾ.ಪಂ ವ್ಯಾಪ್ತಿಗಳಲ್ಲಿ ಚೆಕ್ ಪೋಸ್ಟ್  ಹಾಕಲು ಸೂಚಿಸಲಾಗಿದೆ.  ಆರ್‍ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹಿಡಿದುಕೊಂಡು ಜಿಲ್ಲೆಯನ್ನು ಪ್ರವೇಶಿಸಬೇಕಿದೆ. ದ.ಕ ಮತ್ತು ಕಾಸರಗೋಡು  ಜಿಲ್ಲೆಗಳ ನಡುವೆ ಆರೋಗ್ಯ ಸಂಬಂಧ ವಿಚಾರಕ್ಕೆ ದಿನನಿತ್ಯ ಹಲವು ಜನರು ಬರುತ್ತಾರೆ.  ಅವರಲ್ಲಿ  ರೋಗಿಯ ಆರ್ ಟಿಪಿಸಿಆರ್ ವರದಿಯನ್ನು ಆಸ್ಪತ್ರೆಯಿಂದ ಪಡೆಯಬೇಕು  ಮತ್ತು ಅವರ ಜತೆಗಿರುವ ಸಂಬಂಧಿಕರಲ್ಲಿ ವರದಿಯಿಲ್ಲದಿದ್ದಲ್ಲಿ  ಸ್ವಾಬ್ ಟೆಸ್ಟನ್ನು ಚೆಕ್ ಪೋಸ್ಟ್ ಗಳಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇಂದು ಸಾಂಕೇತಿಕವಾಗಿ  ಜಿಲ್ಲಾಡಳಿತ ಪೊಲೀಸರ ಜೊತೆಗೆ  ಕಾರ್ಯಾಚರಣೆ ನಡೆಸಿದೆ.  ನಾಳೆಯಿಂದ  ಕಟ್ಟುನಿಟ್ಟಾಗಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ  ಕಾರ್ಯಾಚರಿಸಲಿದೆ.  ಕೇರಳ ಭಾಗದಿಂದ ಅನಾವಶ್ಯವಾಗಿ  ಓಡಾಡುವುದನ್ನು ನಿಲ್ಲಿಸಬೇಕಿದೆ.  ಸದ್ಯ ಜಿಲ್ಲೆಯಲ್ಲಿ ಶೇ.5 ಪಾಸಿಟಿವಿಟಿ ರೇಟ್ ಇದ್ದು, ಕೇರಳದಲ್ಲಿ ಶೇ.10 ರಷ್ಟಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪಾಸಿಟಿವಿಟಿ ರೇಟ್ ಕಡಿಮೆಗೊಳಿಸಲು  ಎಚ್ಚರವನ್ನು ವಹಿಸಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭ ಸಹಾಯಕ ಆಯುಕ್ತ ಮದನ್ ಮೋಹನ್ ,  ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎನ್, ಹಾಗೂ ತಲಪಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೇಶವ ಉಪಸ್ಥಿತರಿದ್ದರು.

Exit mobile version