Site icon Ullalavani

ಮುಡಿಪು: ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ. ವಿತರಣೆ

ಕೊಣಾಜೆ : ವಿದ್ಯಾರ್ಥಿಗಳು ಬಲಿಷ್ಠರಾದರೆ ಮಾತ್ರ ಈ ದೇಶ ಬಲಿಷ್ಠವಾಗುತ್ತದೆ ಹೊರತು ಎಂಪಿ, ಎಂಎಲ್ ಎ, ಜನಪ್ರತಿನಿಧಿಗಳಿಂದ ಸಾಧ್ಯವಿಲ್ಲ. ಹಾಗಾಗಿ ಶಿಕ್ಷಣದಲ್ಲಿ ಸ್ಪರ್ಧೆಗೆ ಸರಕಾರ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುತ್ತಿದ್ದು ಶಿಕ್ಷಣಕ್ಕೆ ಆದ್ಯತೆ ನೀಡುವುದೇ ಮುಖ್ಯ ಗುರಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಕುರ್ನಾಡು ಮುಡಿಪಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿ.ಸಿ. ವಿತರಿಸಿ ಮಾತನಾಡಿದರು.
ಯಾವುದೇ ಅಭಿವೃದ್ಧಿಯಲ್ಲಿ ಕನಿಷ್ಟ ಮುಂದಿನ ಮುವತ್ತು ವರ್ಷಗಳ ದೂರದೃಷ್ಟಿ ಇದೆ. ಇಲ್ಲಿ ಸುಂದರ ಪರಿಸರ, ಸುಂದರ ಕಟ್ಟಡ, ನುರಿತ ಉಪನ್ಯಾಸಕರು, ಸಿಬ್ಬಂದಿ ಎಲ್ಲ ಸೌಲಭ್ಯಗಳಿಂದ ಸುಸಜ್ಜಿತವಾಗಿದ್ದು ಈಗ ಕಲಿಯುತ್ತಿರುವ ವಿದ್ಯಾರ್ಥಿಗಳ ಸಾಧನೆ ಮುಂದೆ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಪೂರಕವಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಬಹಳಷ್ಟು ಸೌಲಭ್ಯಗಳು ದೊರಕಿದ್ದು ವಿದ್ಯಾರ್ಥಿಗಳು ಸರ್ವಾಂಗೀಣ ಯಶಸ್ಸು ಕಾಣಬೇಕು ಎಂದು ನುಡಿದರು.
ಕಾಲೇಜು‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಜವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕಾಲೇಜಿನ ಐಟಿ ಸಂಚಾಲಕ ಅಜಯ್, ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಗಿರಿಧರ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿ
ಮುಡಿಪು ಪ್ರಥಮ ದರ್ಜೆ ಕಾಲೇಜಿಗೆ ಹೊಸ ಕಟ್ಟಡದ ಜೊತೆಗೆ ಸ್ಮಾರ್ಟ್ ಕ್ಲಾಸ್ ಯೋಜನೆಯಡಿಯಲ್ಲಿ ಮೂರು ತರಗತಿ‌ನಡೆಸಿ ಕೊಡಲು ಹಾಗೂ ಪ್ರಥಮ ಪದವಿಯ 93ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ದೊರಕಿಸಿಕೊಟ್ಟಿರುವುದು ಶ್ಲಾಘನೀಯ. ಕೆಲವು ವರ್ಷದ ಹಿಂದೆ ಒಂದು ತರಗತಿಯಲ್ಲಿದ್ದ ಕೆಲವು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಟ್ಯಾಬ್ಲೆಟ್ ಪಿ.ಸಿ. ಸಿಗುತ್ತಿದ್ದು ಈಗ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ದೊರಕಿರುವುದು ತುಂಬ ಖುಷಿ ಕೊಟ್ಟಿದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕಿ ಶೋಭಾ ಕಾರ್ಯಕ್ರಮ‌ ನಿರೂಪಿಸಿದರು.
ಫೊಟೊ 23ಉಳ್ಳಾಲ್ ಮುಡಿಪು
*ಕಳೆದ 12ವರ್ಷದಲ್ಲಿ ರಾಜ್ಯದಲ್ಲಿ ಸರಕಾರದಿಂದ ಉತ್ತರ ಕರ್ನಾಟಕದ ಒಂದು ಕಾಲೇಜು ಹೊರತು ಪಡಿಸಿದರೆ ಮುಡಿಪು ಕಾಲೇಜು ಮಾತ್ರ ಆರಂಭಗೊಂಡಿದ್ದು ಮುಡಿಪು ಕಾಲೇಜು ಎಲ್ಲ ವಿಭಾಗದಲ್ಲಿ ಉನ್ನತ ಸ್ಥಾನದಲ್ಲಿದೆ. ಯಾವ ಸರಕಾರ, ಮುಖಂಡರಿಂದ ಯಾರನ್ನೂ ಸಾಕಲು ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಉತ್ತಮ ಬದುಕು ಸಾಗಿಸಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು.
ಯು.ಟಿ. ಖಾದರ್
ಶಾಸಕರು

Exit mobile version