
ಮುಡಿಪು: ಸತ್ತುಬಿದ್ದ ಸ್ಥಿತಿಯಲ್ಲಿ ಸುಮಾರು 15 ವರ್ಷದ ಕಾಡೆಮ್ಮೆ (ಬಾಸ್ ಗೌರಸ್ ) ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಕಲ್ಲಮಂಚ ಎಂಬಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಸತ್ತಿರುವುದಾಗಿ ತಿಳಿಸಿದ್ದು ಮರಣೋತ್ತರ ವರದಿ ಬಂದ ಬಳಿಕವಷ್ಟೇ ಮರಣದ ನಿಖರ ಕಾರಣ ತಿಳಿಸಲಾಗುವುದು ಎಂದು ಮಂಗಳೂರು ವಲಯದ ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ತಿಳಿಸಿದ್ದಾರೆ.
ಖಾಸಗಿ ತೋಟವೊಂದರಲ್ಲಿ ಕಾಡೆಮ್ಮೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸರಕಾರಿ ಪಶು ವೈದ್ಯಾಧಿಕಾರಿ ಅಶೋಕ್ ಅವರು ಕಾಡೆಮ್ಮೆ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಇಲಾಖಾ ಕಾನೂನಿನಂತೆ ಶವವನ್ನು ವಿಲೇವಾರಿ ನಡೆಸಿದ್ದಾರೆ.
ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಲನ್ ಮಾರ್ಗದರ್ಶನದಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.