ಉಳ್ಳಾಲ: ಆರ್ಥಿಕ ಸಂಕಷ್ಟದಿಂದ ನೊಂದು ಎಳೆಯ ಮಗುವಿನ ಎದುರೇ ತಾಯಿಯೋರ್ವಳು ಆತ್ಮಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮನಗರ ಎಂಬಲ್ಲಿ ಇಂದು ಮುಂಜಾನೆ ವೇಳೆ ಬೆಳಕಿಗೆ ಬಂದಿದೆ.
ಧರ್ಮನಗರ ನಿವಾಸಿ ಲೋಕೇಶ್ ನಾಯ್ಕ್ ಎಂಬವರ ಪತ್ನಿ ಶುಭ (33) ಆತ್ಮಹತ್ಯೆ ನಡೆಸಿದವರು. ಗುರುವಾರ ತಡರಾತ್ರಿ ವೇಳೆ ಶುಭ ಅವರು ಕೋಣೆಯೊಂದರಲ್ಲಿ ಎರಡೂವರೆ ಹರೆಯದ ಮಗುವಿನ ಜೊತೆಗೆ ಮಲಗಿದ್ದರು. ಪತಿ ಬೇರೆ ಕೋಣೆಯಲ್ಲಿ ಮಲಗಿದ್ದು, ಇಂದು ಬೆಳಿಗ್ಗೆ ಪತಿ ಲೋಕೇಶ್ ಅವರು ಬಾಗಿಲು ತೆರೆದು ನೋಡಿದಾಗ ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಹಂಪನಕಟ್ಟೆ ಬಳಿ ಫ್ಲೆಕ್ಸ್ ಅಂಗಡಿಯಲ್ಲಿ ಶುಭ ಅವರು ಕೆಲಸಕ್ಕಿದ್ದರು. ಪತಿ ಲೋಕೇಶ್ ಫ್ಯಾಬ್ರಿಕೇಷನ್ ವೃತ್ತಿಯನ್ನು ನಡೆಸುತ್ತಿದ್ದರು. ಆರ್ಥಿಕ ಸಂಕಷ್ಟದಿಂದ ಬೇಸತ್ತು ಆತ್ಮಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ. ಅತ್ತಾವರದಲ್ಲಿದ್ದ ದಂಪತಿ ವರ್ಷದ ಹಿಂದೆ ಧರ್ಮನಗರದಲ್ಲಿ ಮನೆಯನ್ನು ನಿರ್ಮಿಸಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.