Site icon Ullalavani

ಉಚ್ಚಿಲ ತೀರದ ಮೀನುಗಾರರನ್ನು ಖಾಲಿ ಮಾಡಲು ಹೇಳುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ : ಸದಾಶಿವ ಉಳ್ಳಾಲ್

ಉಳ್ಳಾಲ: ಸೋಮೇಶ್ವರ ಉಚ್ಚಿಲ ಭಾಗದ ಸಮುದ್ರ ಕೊರೆತದಿಂದ ಹಾನಿಗೊಳಗಾದ ಬಡ ಮೀನುಗಾರ ಕುಟುಂಬಗಳನ್ನು ಏಕಾಏಕಿ ಖಾಲಿ ಮಾಡುವಂತೆ ಆದೇಶಿಸಿರುವ ಜಿಲ್ಲಾಡಳಿತ ಕ್ರಮ ಸರಿಯಲ್ಲ. 100 ವರ್ಷಗಳಿಗಿಂತ ಹಿಂದೆ ಸ್ಥಳದಲ್ಲಿ ವಾಸಿಸುತ್ತಿರುವ ಕುರಿತು ಮಿಸ್ಪಟ್ಟಾ ಇದ್ದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜಾಗ ಖಾಲಿ ಮಾಡುವಂತೆ ಹೇಳುತ್ತಿರುವ ಸರಕಾರದ ಕ್ರಮ ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಅವರು ಕೊಲ್ಯ ಸಮೀಪ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಸಮುದ್ರ ಕೊರೆತಕ್ಕೆ ಕಪ್ಪು ಕಲ್ಲು ಹಾಕುವ ವ್ಯವಸ್ಥೆ ಇನ್ನೂ ಆಗಿಲ್ಲ. ಬ್ರೇಕ್ ವಾಟರ್ ಒಂದೇ ಕಡೆಯಲ್ಲಿ ಆಗಿದೆ. ತಾತ್ಕಾಲಿಕ ಕಾಮಗಾರಿ ಎರಡು ವರ್ಷಗಳಿಂದ ಕಾಣುತ್ತಿಲ್ಲ. ಮೊದಲಿನ ಹಾಗೆ ಇಟ್ಟ ಕಲ್ಲುಗಳ ಮೇಲೆ ಮತ್ತೆ ಕಲ್ಲು ಹಾಕುತ್ತಿದ್ದಲ್ಲಿ ಕಡಲ್ಕೊರೆತ ಆಗುತ್ತಿರಲಿಲ್ಲ. ಕೋಟ್ಯಂತರ ವ್ಯಯಿಸಿ ಮರಳು ದಿಬ್ಬ ರಚಿಸಿ ಪರಿಹಾರ ಕಂಡುಕೊಳ್ಳುತ್ತಿರುವುದು ಅವೈಜ್ಞಾನಿಕ. ನ್ಯೂನ್ಯತೆಗಳನ್ನು ಸರಿಪಡಿಸದೇ ಇದ್ದಲ್ಲಿ ಬಿಲ್ ಪಾವತಿಯನ್ನೂ ಮಾಡಬಾರದು. ತೌಕ್ತೇ ಚಂಡಾಮಾರುತದಿಂದಾಗಿ ಹಾನಿಗೊಳಗಾದ ಸಂದರ್ಭ ಉಸ್ತುವಾರಿ ಸಚಿವರು, ಮೀನುಗಾರಿಕಾ ಮತ್ತು ಬಂದರು ಇಲಾಖಾ ಸಚಿವರು ಭೇಟಿ ನೀಡಿ ನೋಡಿ ಹೋದರೂ ಈವರೆಗೆ ಪರಿಹಾರ ಕಂಡುಹಿಡಿಯದೇ ಇರುವುದು ವಿಪರ್ಯಾಸ. ಅವರ ತಪ್ಪುಗಳನ್ನು ಮರೆಮಾಚಿ ಇದೀಗ ಏಕಾಏಕಿ ಮೀನುಗಾರರನ್ನು ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ಸ್ಥಳೀಯವಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಿ ಅಥವಾ ರೆಸಾರ್ಟ್‍ಗಳನ್ನು ಖಾಲಿ ಮಾಡಿ ಅದನ್ನು ಮೀನುಗಾರರಿಗೆ ನೀಡಲಿ ಇಲ್ಲವಾದಲ್ಲಿ ಪುರಸಭೆ ಬಾಡಿಗೆ ಪಾವತಿಸಿ ಬಾಡಿಗೆ ಮನೆಯನ್ನಾದರೂ ಮಾಡಲಿ. ಮೀನುಗಾರರು ಮೀನುಗಾರಿಕೆಯನ್ನೇ ಕಸಬು ಮಾಡಿಕೊಂಡಿರುವಾಗ ದೂರದ ಗುಡ್ಡ ಪ್ರದೇಶದಲ್ಲಿ ಜಾಗ ಕೊಟ್ಟರೆ ಸರಿಯೇ?. ಈಗಾಗಲೇ ಎಲ್ಲಾ ಮೀನುಗಾರರ 70 ಸೆಂಟ್ಸ್ ನಷ್ಟು ಸ್ಥಳ ಸಮುದ್ರದ ಪಾಲಾಗಿದೆ. ಇದೀಗ ಇರುವ 5 ಸೆಂಟ್ಸ್ ಸ್ಥಳವನ್ನು ಬಿಟ್ಟು ಹೋಗಲು ನೋಟೀಸು ಮಾಡಿರುವುದು ಸರಿಯೇ?. ಎಂದಿಗೂ ಎಬ್ಬಿಸುವ ಕೆಲಸ ಆಗಬಾರದು, ಸ್ಥಳೀಯವಾಗಿ ವ್ಯವಸ್ಥೆ ಮಾಡಿಕೊಟ್ಟು ಆಮೇಲೆ ಎಬ್ಬಿಸಲಿ ಎಂದು ಎಚ್ಚರಿಸಿದರು. ಉಚ್ಚಿಲ ಸಮುದ್ರ ತೀರದಲ್ಲಿ ಟೆಂಡರ್ ಆಗದೇ ಪ್ರವಾಸೋದ್ಯಮ ಕ್ಕೆ ನೀಡಲಾಗಿರುವುದು ತಪ್ಪು . ಸ್ಥಳೀಯರ ಅಭಿಪ್ರಾಯವನ್ನು ಪಡೆಯದೇ ಅಧಿಕಾರಿಗಳು ಪರಿಹಾರ ಕಂಡುಕೊಳ್ಳುತ್ತಿರುವುದೇ ದುರಂತಗಳಿಗೆ ಕಾರಣವಾಗುತ್ತಿದೆ. ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ವಿರೋಧವಿದೆ. ಶಾಸಕರ ಗಮನಕ್ಕೆ ಅಕ್ರಮ ಮರಳುಗಾರಿಕೆ ತಡೆಯುವಂತೆ ಸೂಚಿಸುತ್ತೇನೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದ ದಿನೇಶ್ ಕುಂಪಲ, ಕಿಶೋರ್ ಗಟ್ಟಿ ಮುಂಡೋಳಿ, ದೀಪಕ್ ಪಿಲಾರ್ ಮತ್ತು ಬಶೀರ್ ಕೊಳಂಗೆರೆ ಉಪಸ್ಥಿತರಿದ್ದರು.

Exit mobile version