Site icon Ullalavani

ಜೂ. 20ರಂದು ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಹೂಹಾಕುವಕಲ್ಲಿನಲ್ಲಿ 300ನೇ ರಕ್ತದಾನ ಶಿಬಿರ

ಉಳ್ಳಾಲ: ಜನರು ರಕ್ತದಾನ ಮಾಡಲು ಹಿಂಜರಿಯುತ್ತಿರುವ ಕಾಲಘಟ್ಟದಲ್ಲಿ ರಕ್ತದ ಅಭಾವ, ರೋಗಿಗಳಿಗೆ ರಕ್ತ ಸಮರ್ಪಕವಾಗಿ ಪೂರೈಕೆಯಾಗದಿರುವುದನ್ನು ಮನಗಂಡು, ರಕ್ತದಾನದ ಮಹತ್ವ ಹಾಗೂ ಅದರಿಂದ ದಾನಿಗಳಿಗೆ ಆಗುವ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಿ ಸಂಘದ ಎಲ್ಲ ಸದಸ್ಯರ ಸಾಂಘಿಕ ಪ್ರಯತ್ನದಿಂದ 298ರಕ್ತದಾನ ಶಿಬಿರ ಆಯೋಜಿಸಿ ದಾನಿಗಳಿಂದ 29ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ ಅರ್ಹ ಫಲಾನುಭವಗಿಳಿಗೆ ಪೂರೈಸಿದ ಮಂಗಳೂರಿನ ಬ್ಲಡ್ ಡೋನರ್ಸ್ ಮಂಗಳೂರು ಎಂಬ ಸಮಾಜ ಸೇವಾ ಸಂಸ್ಥೆ ಜೂ. 20ರಂದು ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲಿನ ಎಸ್. ಕೆ. ಸಭಾಭವನದಲ್ಲಿ 300ನೇ ರಕ್ತದಾನ ಶಿಬಿರ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ ಹೇಳಿದರು.
ದೇರಳಕಟ್ಟೆಯ ಯೇನೆಪೆÇಯ ಆಸ್ಪತ್ರೆ ಬಳಿಯ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2013ರ ಜುಲೈನಲ್ಲಿ ಸಂಘ ಸ್ಥಾಪನೆಗೊಂಡಿದ್ದು ಜೂ. 14ರಂದು ಮಂಜನಾಡಿಯಲ್ಲಿ 299ನೇ ಶಿಬಿರ ಆಯೋಜಿಸಿದೆ. ರಕ್ತದಾನ ಶಿಬಿರವನ್ನು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಳಿಸದೆ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮಾತ್ರವಲ್ಲದೆ ಕೊಲ್ಲಿ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಬಹರೈನ್, ಒಮನ್ ನಲ್ಲಿಯೂ ಸಂಸ್ಥೆಯ ಅನಿವಾಸಿ ಕಾರ್ಯ ನಿರ್ವಾಹಕರ ಸಹಕಾರದಿಂದ ನಿರಂತರವಾಗಿ ಸೂಕ್ತ ಸಮಯದಲ್ಲಿ ರೋಗಿಗಳಿಗೆ ರಕ್ತ ಪೂರೈಸಲಾಗುತ್ತಿದೆ ಎಂದರು. ಸಂಘ ಆರಂಭಗೊಂಡು ಎಂಟು ವರ್ಷ ಕಳೆದಿದ್ದು ಸಂಘಕ್ಕೆ ಅನಿವಾಸಿ ಭಾರತೀಯ ಸಂಸ್ಥೆಗಳು, ವಿವಿಧ ರಕ್ತನಿಧಿ, ಬ್ಲಡ್ ಡೋನರ್ಸ್ ಮಂಗಳೂರು ಮಹಿಳಾ ಘಟಕ ಸೇರಿದಂತೆ ಸುಮಾರು 10 ಸಾವಿರ ಸ್ವಯಂಸೇವಕರಿದ್ದು ಅವರೆಲ್ಲರ ಸಹಕಾರದಿಂದ ರಕ್ತಕ್ಕಾಗಿ ಯಾವುದೇ ರೂಪದಲ್ಲಿ ತುರ್ತು ಕರೆ ಬಂದಾಗ ತಕ್ಷಣ ಸ್ಪಂದಿಸಿದ್ದೇವೆ. ವಾಟ್ಸಾಪ್ ಸಂದೇಶದ ಮೂಲಕ ಬರುವ ಬೇಡಿಕೆಯನ್ನೂ ತಕ್ಷಣ ಪರಿಗಣಿಸಿ ಬೇಡಿಕೆ ಪೂರೈಸಿದ್ದೇವೆ ಎಂದರು. ಸಂಘ ರಕ್ತದಾನಕ್ಕೆ ಮಹತ್ವ ಕೊಡುವುದರ ಜೊತೆಗೆ ಜೊತೆಗೆ “ಸೂರಿಲ್ಲದವರಿಗೆ ಸೂರು” ಎಂಬ ಯೋಜನೆಯಡಿಯಲ್ಲಿ ಮುಡಿಪು ಪರಿಸರದ ಒಂದು ಅರ್ಹ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ಬೈತುನ್ನಾರ್ ಎಂಬ ಶೀರ್ಷಿಕೆಯಡಿಯಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದೆ ಎಂದರು.
ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಸೌದಿ ಅರೇಬಿಯಾದಿಂದ ದಾದಾ ಭಾಯ್ ಟ್ರಾವೆಲ್ಸ್ ಸಹಯೋಗದೊಂದಿಗೆ ಒಟ್ಟು 13 ಚಾರ್ಟರ್ಡ್ ವಿಮಾನವನ್ನು ದಮ್ಮಾಮ್ ನಿಂದ ಮಂಗಳೂರಿಗೆ ಒಟ್ಟು ಒಂದು ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ಕರೆ ತಂದಿದ್ದೇವೆ.
ಪ್ಲಾಸ್ಮಾ ಥೆರಪಿಯಲ್ಲಿ ಸಂಸ್ಥೆ ವಿಶೇಷವಾದ ಕಾರ್ಯಕ್ರಮದೊಂದಿಗೆ ಎಲ್ಲ ಆಸ್ಪತ್ರೆಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಪ್ಲಾಸ್ಮಾ ದಾನಿಗಳ ಸಂಗ್ರಹದಲ್ಲಿ ಮುತುವರ್ಜಿ ವಹಿಸಿದೆ ಎಂದರು. ಇದೇ ಸಂದರ್ಭ ಮುನ್ನೂರನೆಯ ಶಿಬಿರದ ಲಾಂಛನ ಅನಾವರಣಗೊಳಿಸಲಾಯಿತು.
ಪ್ರಧಾನ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಕಾರ್ಯದರ್ಶಿ ರಝಾಕ್ ಸಾಲ್ಮರ, ಕಾರ್ಯನಿರ್ವಾಹಕ ಶಾಹುಲ್ ಹಮೀದ್ ಕಾಶಿಪಟ್ಣ, ಫಾರೂಕು ಆತೂರು, ಸೌದಿ ಘಟಕದ ಇರ್ಷಾದ್ ಉಚ್ಚಿಲ ಹಾಗೂ ದಮಾಮ್ ಘಟಕದ ಪರ್ಝಾನ್ ಸಿದ್ಧಕಟ್ಟೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version