Site icon Ullalavani

ನಾಟೆಕಲ್‍ನಲ್ಲಿ ತಾತ್ಕಾಲಿಕ ಉಳ್ಳಾಲ ತಾಲೂಕು ಕಚೇರಿ ನಿರ್ಮಾಣ : ಶಾಸಕ ಯು.ಟಿ ಖಾದರ್

ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಡೆಸಲಿದೆ. ತಾಲೂಕಿನ ಎಲ್ಲಾ ನಿಯಮಗಳನ್ನು ಜ್ಯಾರಿಗೊಳಿಸಿ ಹಾಗೂ ತಹಶೀಲ್ದಾರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ನೇಮಕಕ್ಕೆ ರಾಜ್ಯ ಸರಕಾರ ಆದೇಶ ನೀಡಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಉಳ್ಳಾಲ ತಾಲೂಕು ಕಚೇರಿಗೆ ಗುರುತಿಸಲಾದ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟಡವನ್ನು ವೀಕ್ಷಿಸಿ ಮಾತನಾಡಿದರು.
ನೂತನ ತಾಲೂಕು ಕಚೇರಿಯ ವ್ಯವಸ್ಥೆ ಕಲ್ಪಿಸುವ ಉಸ್ತುವಾರಿಯನ್ನು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ನೀಡಲಾಗಿದೆ. ತಾತ್ಕಾಲಿಕವಾಗಿ ತಾಲೂಕು ಕಚೇರಿ ನಾಟೆಕಲ್ ನಲ್ಲಿ ಕಾರ್ಯಾಚರಿಸಲಿದ್ದು, ಮುಂದಿನ ದಿನಗಳಲ್ಲಿ ಸರಕಾರಿ ಸ್ಥಳವನ್ನು ಕಂದಾಯ ಇಲಾಖೆ ಗುರುತಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ನಂತರ ಶಾಶ್ವತ ತಾಲೂಕು ಕಚೇರಿಯ ನಿರ್ಮಾಣ ಆಗಲಿದೆ. ಸ್ಥಳ ನಿಗದಿ ಬಳಿಕ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಅನುದಾನವನ್ನು ಸರಕಾರದಿಂದ ಕೇಳಿ ತರುವ ಜವಾಬ್ದಾರಿ ತನ್ನದು. ತಾಲೂಕು ಪಂಚಾಯತ್ ಕಚೇರಿಯೂ ಹತ್ತಿರದಲ್ಲೇ ನಿರ್ಮಾಣವಾಗಲಿದೆ. ತೊಕ್ಕೊಟ್ಟು ಪರಿಸರದಲ್ಲಿ ಕಾರ್ಯಾಚರಿಸುವ ನೆಮ್ಮದಿ ಕೇಂದ್ರ, ಕಂದಾಯ ಇಲಾಖೆ ಅಲ್ಲೇ ನಿರ್ಮಾಣವಾದ ಹೊಸ ಕಟ್ಟಡಕ್ಕೆ ಶೀಘ್ರವೇ ಸ್ಥಳಾಂತರಗೊಳ್ಳಲಿದೆ. ಮಂಗಳೂರು ತಾಲೂಕಿನ 10 ಗ್ರಾ.ಪಂ, 1 ನಗರಸಭೆ, 1 ಪುರಸಭೆ, 1 ಪಟ್ಟಣ ಪಂಚಾಯಿತಿ ಹಾಗೂ ಬಂಟ್ವಾಳ ತಾಲೂಕಿನ 10 ಗ್ರಾಮ ಪಂಚಾಯಿತಿಗಳು ಉಳ್ಳಾಲ ತಾಲೂಕಿಗೆ ಸೇರುತ್ತದೆ. ಈ ನಿಟ್ಟಿನಲ್ಲಿ ಬಂಟ್ವಾಳ ತಹಸೀಲ್ದಾರ್ ಮತ್ತು ಮಂಗಳೂರು ತಹಶೀಲ್ದಾರ್ ಇಬ್ಬರೂ ಸೇರಿಕೊಂಡು ಸರಕಾರಿ ಸ್ಥಳವನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದ್ದಾರೆ. ಭವಿಷ್ಯದ 30-40 ವರ್ಷಗಳವರೆಗೆ ಕಾರ್ಯಾಚರಿಸುವಂತೆ ವಿವಿದೆಡೆ ಬೇರೆ ಬೇರೆ ಇಲಾಖೆಗಳ ನಿರ್ಮಾಣ ಆಗುವ ಮೂಲಕ ರಾಜ್ಯದಲ್ಲಿ ಮಾದರಿ ತಾಲೂಕಾಗಿ ರೂಪಿಸುವ ಚಿಂತನೆಯಿದೆ ಎಂದರು.
ಈ ಸಂದರ್ಭ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಶಿವರಾಜ್, ಉಳ್ಳಾಲ ತಹಶೀಲ್ದಾರ್ ಸಪ್ತಶ್ರೀ,
ಜಿ.ಪಂ ಮಾಜಿ ಸದಸ್ಯ ಎನ್.ಎಸ್ ಕರೀಂ, ಮಂಜನಾಡಿ ಗ್ರಾ.ಪಂ ಅಧ್ಯಕ್ಷೆ ನಸ್ರೀನಾ, ಉಪಾಧ್ಯಕ್ಷ ವಿನ್ಸೆಂಟ್ ವೇಗಸ್, ಕಂದಾಯ ಅಧಿಕಾರಿ ಸ್ಟೀಫನ್ , ಮಂಜನಾಡಿ ಗ್ರಾಮ ಲೆಕ್ಕಾಧಿಕಾರಿ ಪ್ರಸಾದ್, ಮಾಜಿ ಅಧ್ಯಕ್ಷ ಮಹಮ್ಮದ್ ಅಸೈ, ಇಸ್ಮಾಯಿಲ್ ದೊಡ್ಡಮನೆ, ಇಸ್ಮಾಯಿಲ್ ಬಾವು, ಮೊಯ್ದೀನ್ ಕುಂಞÂ, ಅಬ್ಬಾಸ್, ಇಲ್ಯಾಸ್, ಅತಾವುಲ್ಲಾ, ಅಬ್ದುಲ್ ಬಶೀರ್, ನೆಕ್ಕರೆ ಬಾವು, ಟಿ.ಎಸ್ ನಾಸಿರ್ , ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Exit mobile version