Site icon Ullalavani

ಪ್ರತಿ ತಾಲೂಕು ಆಸ್ಪತ್ರೆಯ ನಿರ್ವಹಣೆ ಖಾಸಗಿ ವೈದ್ಯಕೀಯ ಕಾಲೇಜುಗಳು ಮಾಡಲಿ: ಶಾಸಕ ಯು.ಟಿ ಖಾದರ್

ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಯು.ಟಿ ಖಾದರ್

ಉಳ್ಳಾಲ: ಪ್ರತಿ ತಾಲೂಕು ಆಸ್ಪತ್ರೆಗಳನ್ನು ಬೇರೆ ಬೇರೆ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯವರು ನಿರ್ವಹಿಸಬೇಕು. ಈ ಮೂಲಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಬರುವಂತಹ ರೋಗಿಗಳ ಒತ್ತಡವನ್ನು ಕಡಿತಗೊಳಿಸಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್-19 ನಿರ್ವಹಣೆಗೆ ಸಜ್ಜುಗೊಳ್ಳುತ್ತಿರುವ ಆಸ್ಪತ್ರೆ ವಠಾರವನ್ನು ವೀಕ್ಷಿಸಿ ಮಾತನಾಡಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವನ್ನು ತುರ್ತು ಸಂದರ್ಭ ಕೋವಿಡ್ ಕೇರ್ ಆಸ್ಪತ್ರೆಯಾಗಿ ನಿರ್ಮಿಸಲು ಹಂತ ಹಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಲಸಿಕೆ, ಗರ್ಭಿಣಿಯರು ಸಹಿತ ನಿತ್ಯ ಬರುವ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವಿಭಾಗವನ್ನು ಮಾಡಲಾಗುತ್ತಿದೆ.
ಹೆರಿಗೆ, ಇಂಜೆಕ್ಷನ್ ಬರುವವರಿಗೆ ಬೇರೆಯೇ ಜಾಗದಲ್ಲಿ ಪ್ರವೇಶ ಮತ್ತು ಚಿಕಿತ್ಸೆ. ಕೋವಿಡ್ ಸಂಬಂಧಿಸಿದ ರೋಗಿಗಳಿಗೆ ಬೇರೆಯದೇ ಆದ ಫಿವರ್ ಕ್ಲಿನಿಕ್, ಪ್ರವೇಶ ಹಾಗೂ ಆಕ್ಸಿಜನ್ ಲೆವೆಲ್ ಕಡಿಮೆ ಆಗಿ ಬಂದವರನ್ನು ತಕ್ಷಣ ಮೇಲಿನ ಮಹಡಿಯಲ್ಲಿ ದಾಖಲುಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ವೈದ್ಯರ ಸೇವೆ ಹಾಗೂ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆಯನ್ನು ಯೆನೆಪೋಯ ಸಂಸ್ಥೆ ವಹಿಸಿಕೊಂಡಿದೆ. 20 ನರ್ಸುಗಳು, 12 ವೈದ್ಯರುಗಳು, ಅಟೆಂಡರ್, ಕ್ಲೀನರ್, ಡೇಟಾ ಎಂಟ್ರಿ ಆಪರೇಟರ್, ಲಾಂಡ್ರಿ ಎಲ್ಲವೂ ನಿರ್ವಹಣೆ ಮಾಡಲಿದೆ. ತಾನು ಮತ್ತು ಜಿಲ್ಲಾಧಿಕಾರಿ ಯೆನೆಪೋಯ ಸಂಸ್ಥೆ ಎದುರು ನಡೆಸಿದ ಸಭೆಯಲ್ಲಿ ಸಂಸ್ಥೆ ಅಧಿಕೃತರು ಒಪ್ಪಿಕೊಂಡಿದ್ದಾರೆ ಎಂದ ಅವರು ಸದ್ಯ ಉಳ್ಳಾಲದ ಆರೋಗ್ಯ ಕೇಂದ್ರವನ್ನು ತಯಾರು ಮಾಡಿ ಇಡಲಾಗುವುದು. ಊರಿನವರಿಗೆ ತೊಂದರೆಯಾಗುವ ಸಂದರ್ಭ ತಕ್ಷಣವೇ ಆರಂಭಿಸಲಾಗುವುದು ಎಂದರು.
ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಶಾಂತ್ , ನಗರಸಭೆ ಮಾಜಿ ಸದಸ್ಯ ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.

Exit mobile version