UN networks
ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೋವಿಡ್ ಟಾಸ್ಕ್ ಫೋರ್ಸ್‍ನಿಂದ ಸೋಂಕಿತರ ಹಾಗೂ ಅವರ ಮನೆಮಂದಿಯನ್ನು ಆದಷ್ಟು ಕೋವಿಡ್ ಸೆಂಟರಿಗೆ ಹಾಗೂ ಆಸ್ಪತ್ರೆಗೆ ದಾಖಲಿಸುವಂತೆ ಮನವೊಲಿಸುವ ಪ್ರಯತ್ನಗಳಾಗಬೇಕು. ಈ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಸೋಮೇಶ್ವರ ಪುರಸಭೆಯಲ್ಲಿ ಸೋಮವಾರ ಅಧಿಕಾರಿಗಳ, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ, ಪುರಸಭೆ ಸಿಬ್ಬಂದಿಗಳ ಜೊತೆಗೆ ಆಯೋಜಿಸಿದ್ದ ಕೋವಿಡ್ ಪರಿಶೀಲನಾ ಸಭೆ ಹಾಗೂ ಸೇಫ್ಟಿ ಕಿಟ್ ವಿತರಣೆ ನಡೆಸಿ ಮಾತನಾಡಿದರು.
ಸೋಮೇಶ್ವರ ಪುರಸಭೆಯ 23 ವಾರ್ಡುಗಳನ್ನು ನಾಲ್ಕು ಝೋನ್ ಆಗಿ ವಿಭಾಗಿಸಿ ಆಯಾಯ ಝೋನ್ ಗಳಿಗೆ ಅಧಿಕಾರಿಯನ್ನು ನೇಮಕಗೊಳಿಸಲಾಗಿದೆ. ಅವರ ಮೂಲಕ ವಾರ್ಡ್ ಸಮಿತಿ ಸಭೆಯನ್ನು ಎರಡು ದಿನಕ್ಕೊಮ್ಮೆ ನಡೆಸಲು ಸೂಚಿಸಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಮನೆಮಂದಿ ಜೊತೆಗೆ ಟಾಸ್ಕ್ ಫೋರ್ಸ್ ತಂಡ ಮಾತುಕತೆ ನಡೆಸಿ ಅವರನ್ನು ಕೋವಿಡ್ ಕೇರ್ ಸೆಂಟರಿಗೆ ಹೋಗುವಂತೆ ಮನವೊಲಿಸುವ ಪ್ರಯತ್ನಗಳಾಗಬೇಕು. ಅದಕ್ಕಾಗಿ ಬೆಳ್ಮದಲ್ಲಿ ನೋಡೆಲ್ ಸೆಂಟರನ್ನು ಮಾಡಲಾಗಿದೆ. ಕೋವಿಡ್ ಸೆಂಟರಿನಲ್ಲಿ ಔಷಧಿ ಹಾಗೂ ಆಹಾರ ಉಚಿತವಾಗಿ ನೀಡಲಾಗುತ್ತದೆ ಹಾಗೂ ಬಡತನದಲ್ಲಿದ್ದುಕೊಂಡು ಸೋಂಕಿತರಾಗಿ ಮನೆಯಲ್ಲಿರುವ ಮಂದಿಗೆ ಒಂದು ತಿಂಗಳ ಊಟದ ಕಿಟ್ ಕೊಡುವಂತಹ ತೀರ್ಮಾನ ಕೈಗೊಳ್ಳಲಾಗಿದೆ. ಶಿಕ್ಷಣ ಇಲಾಖೆಯವರು ಪ್ರಾಥಮಿಕ ಸಂಪರ್ಕದವರ ಮಾಹಿತಿಗಳನ್ನು ಕಲೆಹಾಕುವ ಜವಾಬ್ದಾರಿಯಿದೆ. ಸೋಮೇಶ್ವರ ಪುರಸಭೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಡಿಗ್ರೂಪ್ ನೌಕರರಿಗೆ ಸೇಫ್ಟಿ ಕಿಟ್ ಅನ್ನು ವಿತರಿಸಲಾಗಿದೆ. ಜೊತೆಗೆ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಹೋರ್ಡಿಂಗ್ಸ್ ಅನ್ನು ಸೋಮೇಶ್ವರ ಪಂಚಾಯಿತಿ ವಠಾರ ಹಾಗೂ ಗ್ರಾ.ಪಂ ವ್ಯಾಪ್ತಿಗಳಲ್ಲಿ ಅಳವಡಿಸಲಾಗಿದೆ. ಇದು ಪುರಸಭೆ ವತಿಯಿಂದ ಪಡೆದುಕೊಂಡ ಉತ್ತಮ ಜಾಗೃತಿ ಕಾರ್ಯಕ್ರಮ ಎಂದರು.
108 ಆಂಬ್ಯುಲೆನ್ಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ವೇತನ ಎರಡು ತಿಂಗಳಿನಿಂದ ಪಾವತಿಯಾಗಿಲ್ಲ. ಆಯುಷ್ಮಾನ್ ಯೋಜನೆಯಡಿ ರೂ. 20 ಕೋಟಿ ಯಷ್ಟು ಖಾಸಗಿ ಆಸ್ಪತ್ರೆಗಳಿಗೆ ಹಣ ಕೊಡಲು ಸರಕಾರ ಬಾಕಿಯಿದೆ. ಇದರಿಂದ ಸರಕಾರಿ ಸವಲತ್ತುಗಳನ್ನು ಹೊಂದಿರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ತಾತ್ಸಾರದಿಂದ ನೋಡುವ ಕೆಲಸವಾಗುತ್ತಿದೆ. ಈ ಕೂಡಲೇ ಆರೋಗ್ಯ ಸಚಿವರಿಗೆ ಹಣ ಆದಷ್ಟು ಬೇಗ ಪಾವತಿಸುವಂತೆ ಹಾಗೂ ವೇತನ ನೀಡುವಂತೆ ಒತ್ತಾಯಿಸುತ್ತೇನೆ ಎಂದರು.
ಈ ಸಂದರ್ಭ ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್, ತಾಲೂಕು ಆರೋಗ್ಯ ಅಧಿಕಾರಿ ಸುಜಯ್ ಭಂಡಾರಿ , ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋಪಿ ಪ್ರಕಾಶ್, ಬಿಇಓ ರಾಜಲಕ್ಷ್ಮೀ ಉಪಸ್ಥಿತರಿದ್ದರು.
ಸೋಮೇಶ್ವರದ ಒಂದು ಕಂಪೌಂಡ್ ಕಂಟೋನ್ಮೆಂಟ್ ಝೋನ್ !
ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 165 ಸೋಂಕಿತರಿದ್ದಾರೆ. ಬೆಂಗಳೂರಿನಿಂದ ಊರಿಗೆ ಬಂದಿದ್ದ 80 ರ ಹರೆಯದ ಮಹಿಳೆಯೊಬ್ಬರು ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ಸೋಮೇಶ್ವರ ಸಮೀಪದ ಮಹಮ್ಮದಾಲಿ ಕಂಪೌಂಡಿನಲ್ಲಿ ಆರು ಮಂದಿ ಸೋಂಕಿತರಿರುವ ಹಿನ್ನೆಲೆಯಲ್ಲಿ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಪುರಸಭೆ ವತಿಯಿಂದ ಮನೆಯಲ್ಲೇ ಐಸೊಲೇಷನ್ ಹೊಂದಿರುವ ಸೋಂಕಿತರ ಸುರಕ್ಷೆಯ ದೃಷ್ಟಿಯಿಂದ ವೀಡಿಯೋ ಕಾಲ್ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಜೊತೆಗೆ ಸಂಶಯಗಳು, ಸಮಸ್ಯೆಗಳಿದ್ದಲ್ಲಿ ಪುರಸಭೆ ಕಚೇರಿ 0824 2466572 ಸಂಪರ್ಕಿಸಬಹುದು. ಸೋಮೇಶ್ವರ ಪುರಸಭೆ ವತಿಯಿಂದ ತಳಮಟ್ಟದಲ್ಲಿ ಕೋವಿಡ್ ವಾರಿಯರ್ ಗಳಾಗಿ ಕಾರ್ಯಚರಿಸುತ್ತಿರುವ 14 ಅಂಗನವಾಡಿ, 15 ಆಶಾ ಕಾರ್ಯಕರ್ತೆಯರು ಹಾಗೂ 6 ಮಂದಿ ಪೌರಕಾರ್ಮಿಕರಿಗೆ ಸೇಫ್ಟಿ ಕಿಟ್ ವಿತರಿಸಲಾಗಿದೆ.
ವಾಣಿ ಆಳ್ವ
ಪೌರಾಯುಕ್ತರು